ಸಾರಾಂಶ
ಅಂಕೋಲಾ : ತಾಲೂಕಿನ ಶಿರೂರಿನ ಬಳಿ ಗುಡ್ಡ ಕುಸಿದ ಪ್ರದೇಶಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಈ ಪ್ರಕರಣದ ಕುರಿತು ಸಮಗ್ರ ಮಾಹಿತಿ ಪಡೆದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಉಕ ಜಿಲ್ಲೆಯ ಅಂಕೋಲಾದ ಶಿರೂರಿನ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ನಡೆದ ಮಣ್ಣು ಕುಸಿತ ಘಟನೆ ಅತ್ಯಂತ ಅಮಾನುಷವಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ.
ಈ ಪ್ರಕರಣದಲ್ಲಿ ರಾಜ್ಯ ಸರಕಾರ ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿದೆ. 2018ರಲ್ಲಿ ನಾನು ರಾಜ್ಯ ಮುಖ್ಯಮಂತ್ರಿ ಇದ್ದಾಗ ಕೊಡಗು ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿತಗೊಂಡು ದೊಡ್ಡ ಆಘಾತವೆ ನಡೆದಿತ್ತು. ಆಗ ಸಂತ್ರಸ್ತರಿಗೆ ಪುನರ್ವಸತಿ ಕಲ್ಲಿಸುವ ನಿಟ್ಟಿನಲ್ಲಿ ತಲಾ ₹10 ಲಕ್ಷ ವೆಚ್ಚದಲ್ಲಿ 1100 ಮನೆಗಳನ್ನು ನಿರ್ಮಿಸಿಕೊಟ್ಟು ಅವರ ನೆರವಿಗೆ ನಾವು ಜೊತೆಯಾಗಿದ್ದೇವು. ಆಗ ನಾನು ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರಕಾರದ ಅನುದಾನಕ್ಕಾಗಿ ಕಾಯುತ್ತ ಕುಳಿತಿರಲಿಲ್ಲ. ರಾಜ್ಯ ಸರಕಾರಕ್ಕೆ ಇಂತಹ ಪ್ರಕರಣವಾದಾಗ ಅತಿ ಹೆಚ್ಚು ಹೊಣೆಗಾರಿಕೆ ಇರುತ್ತದೆ. ಅದನ್ನು ಬಿಟ್ಟು ಆರೋಪ-ಪತ್ಯಾರೋಪ ಮಾಡುವುದು ಸರಿಯಲ್ಲ ಎಂದರು.
ಈಗ ರಾಜ್ಯ ಸರಕಾರ ಕೇವಲ ಪುಡಿಗಾಸು ನೀಡಿ ಸಂತ್ರಸ್ತರನ್ನು ಸಮಾಧಾನ ಮಾಡಲು ಹೊರಟಿದ್ದಾರೆ. ಇದಕ್ಕೆ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಆಗಬೇಕಿದೆ. ಕೇಂದ್ರ ಸರಕಾರದಿಂದ ಎನ್.ಡಿ.ಆರ್.ಎಫ್. ತಂಡವನ್ನು ಕಳುಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಕುಳಿತು ವಿಡಿಯೋ ಕಾನ್ಪರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡುವುದನ್ನು ಬಿಟ್ಟು ಸ್ಥಳಕ್ಕೆ ಬಂದು ಪ್ರಕರಣದ ನೈಜತೆ ಅರಿಯುವ ಕೆಲಸವನ್ನ ರಾಜ್ಯ ಸರಕಾರ ಮಾಡುವಂತಾಗಬೇಕು. ಇದರಿಂದ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ, ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಉಕ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪರಿಹಾರೋಪಾಯಕ್ಕೆ ಪ್ರಯತ್ನ
ಅರಣ್ಯ ಇಲಾಖೆ ತನ್ನ ಗಡಿ ರೇಖೆಯನ್ನು ಹಾಕಿರುವುರಿಂದ ಗುತ್ತಿಗೆ ನಿರ್ವಹಿಸುವ ಕಂಪನಿಗೆ ಅದನ್ನು ದಾಟಿ ಹೋಗಲಾರದೆ ಲಂಬ ಕೋನಾಕೃತಿಯಲ್ಲಿ ಗುಡ್ಡವನ್ನು ಕೊರೆಯಬೇಕಾಯಿತು. ಇನ್ನೂ ಅವಕಾಶ ನೀಡಿದರೆ ಮೆಟ್ಟಿಲಾಕೃತಿಯಲ್ಲಿ ಗುಡ್ಡ ಕೊರೆಯಬಹುದಿತ್ತು ಎಂಬ ಅನಿಸಿಕೆ ಕೆಲವರಿಂದ ಕೇಳಿ ಬಂದಿದೆ. ಆದರೆ, ಅರಣ್ಯ ಇಲಾಖೆಗೆ ತನ್ನದೆ ಆದ ಕಾನೂನು ಇರುತ್ತದೆ. ಪಶ್ಚಿಮ ಘಟ್ಟದ ಪ್ರದೇಶದ ಅಂಚಿನಲ್ಲಿ ಅಭಿವೃದ್ಧಿಯಾಗಬೇಕಾದರೆ ಕಠಿಣವಾದ ಶರತ್ತು ಇರುತ್ತದೆ. ಹಾಗಾಗಿ ಅರಣ್ಯ ಇಲಾಖೆಯಿಂದಲೂ ಕೆಲವೊಂದು ತಪ್ಪುಗಳಾಗಿವೆ. ಈ ಬಗ್ಗೆ ಕೇಂದ್ರ ಮಟ್ಟದಲ್ಲೆ ನಿರ್ಣಯದ ಮಂಡನೆಯಾಗಬೇಕಾಗುತ್ತದೆ. ಈ ಬಗ್ಗೆಯೂ ನಾನು ಪ್ರಧಾನಿಯವರ ಬಳಿ ವಿಷಯದ ಗಂಭೀರತೆ ತಿಳಿಸಿ ಈ ಸಮಸ್ಯೆಯ ಪರಿಹಾರೋಪಾಯಕ್ಕೆ ಪ್ರಯತ್ನಿಸುತ್ತೇನೆ.
ಹಾಗೆ ಇದರಲ್ಲಿ ಕೇವಲ ರಾಷ್ಟೀಯ ಹೆದ್ದಾರಿ ಗುತ್ತಿಗೆ ನಿರ್ವಹಿಸುವ ಕಂಪನಿಯಿಂದ ಮಾತ್ರ ತಪ್ಪಾಗಿದೆ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಲ್ಲ. ರಾಜ್ಯದ ಹಲವಾರು ಕಡೆಗಳಲ್ಲಿ ಗುಡ್ಡ ಕುಸಿತ ಪ್ರಕರಣ ವರದಿಯಾಗಿದೆ. ಎಲ್ಲ ವಿಷಯಗಳ ಕುರಿತು ಆಳ ಅಧ್ಯಯನ ನಡೆಯಬೇಕಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಪ್ರಧಾನಿ ಗಮನಕ್ಕೆ
ಕುಮಾರಸ್ವಾಮಿಯವರು ಕೇವಲ ಶಿರೂರಿಗೆ ಭೇಟಿ ಕೊಟ್ಟರೆ ಸಾಲದು. ಅವರು ಕೇಂದ್ರದಿಂದ ಪರಿಹಾರ ಕೊಡಿಸಲು ಇಚ್ಛಾಶಕ್ತಿ ತೋರಿಸಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹೇಳಿಕೆಗೆ ಪ್ರತಿಕೃಯಿಸಿದ ಸಚಿವ ಎಚ್.ಡಿ. ಕುಮಾರಸ್ವಾಮಿ ಇಲ್ಲಿ ಆಗಿರುವ ಅನಾಹುತದ ಬಗ್ಗೆ ಪ್ರಧಾನಿಗಳ ಗಮನಕ್ಕೆ ತರುತ್ತೇನೆ. ಕೇವಲ ಕೇಂದ್ರ ಸರಕಾರದ ಮೇಲೆ ಗೋಬೆ ಕೂರಿಸುವ ಕೆಲಸ ಮಾಡಿ, ಟೀಕೆ ಮಾಡುವುದರಿಂದ ಇವರಿಗೆ ಏನು ಸಿಗತ್ತೆ. ಮೊದಲು ರಾಜ್ಯ ಸರಕಾರ ತಮ್ಮ ಜವಾಬ್ದಾರಿ ನಿರ್ವಹಿಸಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಾಪತ್ತೆಯಾದ ಜಗನ್ನಾಥರ ಮಕ್ಕಳಿಗೆ ಕೆಲಸ ಕೊಡಿಸುವ ಭರವಸೆ
ಅಂಕೋಲಾ
ತಾಲೂಕಿನ ಶಿರೂರಿನ ಗುಡ್ಡ ಕುಸಿದು ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಮೂವರು ಹೆಣ್ಣು ಮಕ್ಕಳಿಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಸಾಂತ್ವನ ಹೇಳಿ ಇಬ್ಬರಿಗೆ ಕೆಲಸ ನೀಡುವ ಭರವಸೆ ನೀಡಿದರು.
ನಾಪತ್ತೆಯಾಗಿರುವ ಜಗನ್ನಾಥ ಅವರ ಪತ್ತೆಗೆ ಶ್ರಮಿಸಲಾಗುತ್ತಿದೆ. ಕಾರ್ಯಾಚರಣೆಗೆ ಸ್ವಲ್ಪ ಅಡಚಣೆಯಾಗಿರುವುದರಿಂದ ವಿಳಂಬವಾಗಿದೆ. ಇಬ್ಬರು ಹೆಣ್ಣು ಮಕ್ಕಳಿಗೆ ಕೆಲಸ ನೀಡುತ್ತೇನೆ. ಕುಮಟಾದ ಸೂರಜ್ ನಾಯ್ಕ ಸೋನಿ ಅವರಿಗೆ ಈ ಬಗ್ಗೆ ಸೂಚಿಸಿ ಇವರ ಸಂಪೂರ್ಣ ಮಾಹಿತಿ ಪಡೆದು ದಾಖಲಾತಿಗಳನ್ನು ಸಲ್ಲಿಸುವಂತೆ ಹೇಳಿದರು.
ಹಾಗೆ ಜಗನ್ನಾಥ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಕೆಲವು ತಾಂತ್ರಿಕ ಕಾರಣ ಎದುರಾಗಿದೆ. ಶವ ಪತ್ತೆಯಾಗದೆ ಪರಿಹಾರ ನೀಡಲು ಸಾಧ್ಯವಿಲ್ಲ. ರಕ್ಷಣಾ ಸಿಬ್ಬಂದಿಗೆ ಇನ್ನಷ್ಟು ಚುರುಕಿನಿಂದ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಸದ್ಯದಲ್ಲಿಯೆ ಈ ಬಗ್ಗೆ ಸ್ಪಷ್ಠ ಚಿತ್ರಣ ಸಿಗಲಿದೆ ಎಂದು ಸಾಂತ್ವನ ಹೇಳಿದರು.