ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ಮುಂದಿನ ದಿನಗಳಲ್ಲಿ ನೀರು ಹರಿಸುವ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆ.17ರಂದು ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘದಿಂದ ಚಳವಳಿ ಹಮ್ಮಿಕೊಂಡಿದೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ ಒಂದು ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಆದರೆ, ಎಷ್ಟು ದಿನದವರೆಗೆ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುವುದು ಎಂಬ ಅಧಿಕೃತ ಕ್ಯಾಲೆಂಡರ್ ಬಿಡುಗಡೆ ಮಾಡಿಲ್ಲ. ಇದು ರೈತ ಸಮುದಾಯದ ಆತಂಕಕ್ಕೆ ಕಾರಣವಾಗಿದೆ ಎಂದರು.
ರೈತರ ಆತಂಕ ನಿವಾರಣೆಗಾಗಿ ರಾಜ್ಯ ರೈತಸಂಘ ಈ ಹಿಂದೆ ಹೇಳಿದಂತೆ ಆ.17ರಿಂದ ಕರೆ ನೀಡಿರುವ ರೈತ ಚಳವಳಿಯನ್ನು ಹಿಂಪಡೆಯುತ್ತಿಲ್ಲ. ರಾಜ್ಯ ಸರ್ಕಾರ ಯಾವುದೇ ನಿರ್ದಿಷ್ಟ ಕಾರ್ಯಸೂಚಿ ರೂಪಿಸದೆ ಪ್ರತಿ ವರ್ಷವೂ ಹೇಮೆ ನೀರಿಗಾಗಿ ರೈತ ಸಮೂಹ ಬೀದಿ ಹೋರಾಟ ಮಾಡಬೇಕಾದ ಸನ್ನಿವೇಶವನ್ನು ನಿರ್ಮಿಸಿದೆ ಎಂದು ಕಿಡಿಕಾರಿದರು.ಹೇಮೆ ನೀರು ಬಿಡಲು ಐಸಿಸಿ ಮೀಟಿಂಗ್ ಮತ್ತಿತರ ಕುಂಟುನೆಪ ಹೇಳಿ ಸರ್ಕಾರ ಸತಾಯಿಸುತ್ತಿತ್ತು. ಆ.17ರ ಸೋಮವಾರ ರಾಜ್ಯ ರೈತಸಂಘ ಕರೆ ನೀಡಿದ್ದ ನೀರಿಗಾಗಿ ಹೋರಾಟದ ಹಿನ್ನೆಲೆಯಲ್ಲಿ ಯಾವುದೇ ಐಸಿಸಿ ಮೀಟಿಂಗ್ ನಡೆಸದೆ ಗೊರೂರು ಜಲಾಶಯದಿಂದ ನೀರು ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದೆ. ಆದರೆ, ಕೆರೆಗಳನ್ನು ಎಷ್ಟು ಪ್ರಮಾಣದಲ್ಲಿ ತುಂಬಿಸಲಾಗುವುದು. ಎಷ್ಟು ದಿನದವರೆಗೆ ಕಾಲುವೆಯಲ್ಲಿ ನೀರಿ ಹರಿಸಲಾಗುವುದು ಎನ್ನುವ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ ಎಂದರು.
ಹೇಮೆ ನೀರಿನ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಬೇಕಾಗಿರುವುದರಿಂದ ಅನಿರ್ದಿಷ್ಟಾವಧಿ ಚಳವಳಿ ಬದಲು ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ಹೇಮೆ ನೀರಿನಿಂದ ಪೂರ್ಣ ಪ್ರಮಾಣದಲ್ಲಿ ತುಂಬಿಸುವಂತೆ ಆಗ್ರಹಿಸಿ ಒಂದು ದಿನದ ಪ್ರತಿಭಟನೆ ನಡೆಸಲಾಗುವುದು ಎಂದರು.
ನದಿ ಅಣೆಕಟ್ಟೆ ನಾಲೆಗಳು:
ತಾಲೂಕಿನ ಮಂದಗೆರೆ ಮತ್ತು ಹೇಮಗಿರಿಯಲ್ಲಿ ಮೈಸೂರು ಅರಸರ ಆಳಲ್ವಿಕೆಯಲ್ಲಿ ಶತಮಾನದ ಹಿಂದೆಯೇ ನಿರ್ಮಿಸಲ್ಪಟ್ಟ ಒಡ್ಡು ಅಣೆಕಟ್ಟೆ ನಾಲೆಗಳಿವೆ. ಮಳೆಗಾಲದಲ್ಲಿ ನದಿ ಹರಿಯುವಿಕೆ ನೀರನ್ನು ಅಧರಿಸಿ ಈ ನಾಲಾ ವ್ಯಾಪ್ತಿಯ ರೈತರು ಅನಾಧಿ ಕಾಲದಿಂದಲೂ ಭತ್ತ ಬೆಳೆಯುತ್ತಿದ್ದಾರೆ. ಗೊರೂರು ಅಣೆಕಟ್ಟೆ ನಿರ್ಮಾಣದ ಅನಂತರ ಈ ನಾಲಾ ವ್ಯಾಪ್ತಿಯ ರೈತರ ಕಾಯಂ ನೀರಿನ ಹಕ್ಕು ಕಸಿಯಲಾಗಿದೆ ಎಂದರು.ಪ್ರಸಕ್ತ ವರ್ಷ ಕಳೆದ 15 ದಿನಗಳ ಹಿಂದೆ ಮಂದಗೆರೆ ಮತ್ತು ಹೇಮಗಿರಿ ನಾಲೆಗಳಿಗೆ ನೀರು ಹರಿಸಲಾಗಿದೆ. ಆದರೆ, ನೀರು ಹರಿಸಿದ ಅನಂತರ ಹೂಳೆತ್ತುವ ಹೆಸರಿನಲ್ಲಿ ಮತ್ತೆ ನಾಲೆ ನೀರು ಬಂದ್ ಮಾಡಲಾಗಿದೆ. ತಕ್ಷಣವೇ ಸದರಿ ನಾಲೆಗಳಲ್ಲಿ ಹೂಳೆತ್ತುವ ಕಾರ್ಯ ನಿಲ್ಲಿಸಿ ರೈತರಿಗೆ ಅಗತ್ಯ ನೀರು ಹರಿಸಬೇಕು. ಸೋಮವಾರದ ಪ್ರತಿಭಟನೆಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಅಗತ್ಯ ಒತ್ತಡ ಹಾಕಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಬ್ಯಾಲದಕೆರೆ ಶಿವಣ್ಣ, ಲಕ್ಷ್ಮೀಪುರ ನಾಗರಾಜು ಮತ್ತಿತರರಿದ್ದರು.