ಸಾರಾಂಶ
ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಜಿಲ್ಲೆಗೆ ಕೇವಲ ₹೧೦ ಕೋಟಿ ನೀಡಿ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತ ತನ್ನ ಪಾಲಿನ ಕರ್ತವ್ಯವನ್ನು ಮರೆತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.
ತಾಲೂಕಿನ ನಂದಿಪುರ ಕ್ಷೇತ್ರದಲ್ಲಿ ಶ್ರೀಗುರು ದೊಡ್ಡಬಸವೇಶ್ವರ ರಥೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನರು ನೀಡಿದ ಅಧಿಕಾರವನ್ನು ಜನಪರವಾಗಿ ಸರ್ಕಾರ ಬಳಸಿಕೊಳ್ಳುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ೧೫ನೇ ಬಜೆಟ್ ಮಂಡಿಸಿದರೂ ರಾಜ್ಯದ ಪ್ರಗತಿಯ ದೃಷ್ಟಿಕೋನವಿಲ್ಲದಿರುವುದು ದುರಂತ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಸೀಟು ಸಿಗದಂತಾಗಿದೆ. ಈ ಮೊದಲು ಮಹಿಳೆಯರಿಗೆ ಬಸ್‌ಗಳಲ್ಲಿ ಸೀಟು ನೀಡಲಾಗುತ್ತಿತ್ತು. ಇದೀಗ ಮಹಿಳೆಯರಿಗೆ ಗೌರವವಿಲ್ಲದಾಗಿದೆ ಎಂದರು.ಬಿಜೆಪಿ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ. ಯಾರಿಗೆ ಟಿಕೇಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಲು ಪ್ರಯತ್ನಿಸುತ್ತೇನೆ. ಮಠಮಾನ್ಯಗಳನ್ನು ಬೆಳೆಸುವುದರಿಂದ ಜಾತ್ಯತೀತವಾಗಿ ಮಕ್ಕಳಿಗೆ ಶಿಕ್ಷಣ ಒದಗುತ್ತದೆ. ರಾಮಮಂದಿರ ೨ ಲಕ್ಷ ಜನರ ದೊಡ್ಡ ಹೋರಾಟವಾಗಿತ್ತು. ಶ್ರೀರಾಮಚಂದ್ರ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ರಾಮರಾಜಕಾರಣವೆಂಬುದು ಕೇವಲ ಕಟ್ಟುಕತೆಯಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕುರಿತಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಮಾಹಿತಿ ಕೊರತೆ ಕಾಡುತ್ತಿರಬಹುದು, ಇಲ್ಲವೆ ಅತಿ ಬುದ್ಧಿವಂತರಾಗಿರಬಹುದು ಎಂದು ಲೇವಡಿ ಮಾಡಿದರು. ಇದೇ ವೇಳೆ ಡಾ. ಮಹೇಶ್ವರ ಸ್ವಾಮೀಜಿ ಶ್ರೀರಾಮುಲು ಅವರನ್ನು ಸನ್ಮಾನಿಸಿದರು. ಕಲ್ಯಾಣ ಸ್ವಾಮೀಜಿ, ಚರಂತೇಶ್ವರ ಸ್ವಾಮೀಜಿ, ಮುಖಂಡರಾದ ಬನ್ನಿಗೋಳ ವೆಂಕಣ್ಣ, ಸೋಗಿ ಎಂ. ಬಸವರಾಜ, ವಟ್ಟಮ್ಮನಹಳ್ಳಿ ಉದಯ, ನಿವೃತ್ತ ಶಿಕ್ಷಕ ಕೊಟ್ರುದೇವ್ರು ಇದ್ದರು.