ರವೀಂದ್ರ ಕಲಾ ಕ್ಷೇತ್ರ ನವೀಕರಣ ಇಲ್ಲ!

| Published : Feb 09 2024, 01:47 AM IST

ಸಾರಾಂಶ

ಕೆಲ ಹಿರಿಯ ರಂಗಕರ್ಮಿಗಳ ಅಸಮಾಧಾನಕ್ಕೆ ಕಾರಣವಾಗಿದ್ದ ಕನ್ನಡ ಭವನ ಆವರಣದ ರವೀಂದ್ರ ಕಲಾಕ್ಷೇತ್ರದ ನವೀಕರಣ ಕಾಮಗಾರಿ ಕೈಗೊಳ್ಳದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲ ಹಿರಿಯ ರಂಗಕರ್ಮಿಗಳ ಅಸಮಾಧಾನಕ್ಕೆ ಕಾರಣವಾಗಿದ್ದ ಕನ್ನಡ ಭವನ ಆವರಣದ ರವೀಂದ್ರ ಕಲಾಕ್ಷೇತ್ರದ ನವೀಕರಣ ಕಾಮಗಾರಿ ಕೈಗೊಳ್ಳದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಬಿ.ತಂಗಡಗಿ ಅವರನ್ನು ಭೇಟಿ ಮಾಡಿದ ಹಿರಿಯ ರಂಗಕರ್ಮಿಗಳ ನಿಯೋಗ ರವೀಂದ್ರ ಕಲಾಕ್ಷೇತ್ರದ ನವೀಕರಣದ ಕುರಿತು ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ತಂಗಡಗಿ ಅವರು, ಆಧುನಿಕತೆಗೆ ತಕ್ಕಂತೆ ಕಲಾಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು. ಹವಾನಿಯಂತ್ರಣ, ಧ್ವನಿ ಬೆಳಕು, ವಿದ್ಯುತ್ ಸೌಲಭ್ಯ ಇತ್ಯಾದಿಗಳು ಒಳಗೊಂಡಂತೆ ರವೀಂದ್ರ ಕಲಾಕ್ಷೇತ್ರವನ್ನು ನವೀಕರಿಸಲು ಯೋಜಿಸಲಾಗಿತ್ತು. ಅದಕ್ಕಾಗಿ 10ರಿಂದ 15 ಕೋಟಿ ರು.ಗಳಷ್ಟು ಖರ್ಚಾಗಬಹುದೆಂದು ಅಂದಾಜಿಲಾಗಿತ್ತು. ಆದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸಚಿವ ನಿರ್ಧಾರದಿಂದ ಹಿರಿಯ ರಂಗ ಕರ್ಮಿಗಳ ನಿಯೋಗದಲ್ಲಿದ್ದವರಲ್ಲೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದು, ನಾಲ್ಕೈದು ಜನರ ವಿರೋಧಕ್ಕೆ ರವೀಂದ್ರ ಕಲಾಕ್ಷೇತ್ರದ ನವೀಕರಣ ಮಾಡದಿರುವುದು ಸರಿಯಲ್ಲ. ನಮ್ಮೆಲ್ಲರ ಬೆಂಬಲ ನವೀಕರಣಕ್ಕೆ ಇದೆ ಎಂದು ಹಲವರು ಸಮ್ಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರವೀಂದ್ರ ಕಲಾಕ್ಷೇತ್ರದ ನವೀಕರಣ ಕಾಮಗಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ₹24 ಕೋಟಿ ಖರ್ಚು ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿತ್ತು.