ಸಾರಾಂಶ
ಅಲ್ಲಂಪುರ ಶಾಲೆಯಲ್ಲಿ ನಲಿಕಲಿ ಟೇಬಲ್ ಮತ್ತು ಚೇರ್ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವರ್ಗದ ಮಕ್ಕಳಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ತಾಲೂಕಿನ ಅಲ್ಲಂಪುರ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಸೇವಾ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನಲಿಕಲಿ ಟೇಬಲ್ ಮತ್ತು ಚೇರ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹುಟ್ಟಿದ ಮೇಲೆ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡದಿದ್ದರೆ ಬದುಕಿಗೆ ಸಾರ್ಥಕತೆ ಆಗುವುದಿಲ್ಲ. ಇಲ್ಲಿ ಸೇರಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ವಿದ್ಯಾರ್ಥಿಗಳು ತಮ್ಮ ಬದುಕಿನುದ್ದಕ್ಕೂ ನೆನಪಿನಲ್ಲಿಟ್ಟು ಕೊಂಡಿರುತ್ತಾರೆ ಎಂದು ಹೇಳಿದರು.ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ತಾಲೂಕಿನ 70 ಸರ್ಕಾರಿ ಪ್ರಾಥಮಿಕ ಹಿರಿಯ ಮತ್ತು ಕಿರಿಯ ಶಾಲೆಗಳಿಗೆ ₹12 ಲಕ್ಷ ವೆಚ್ಚದಲ್ಲಿ ಬೆಂಗಳೂರಿನ ಸಿನೊಪ್ಸಿಸ್ ಕಂಪನಿ ಮತ್ತು ಇಂಡಿಯಾ ಸುಧಾರ್ ಎಜುಕೇಷನ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ನಲಿಕಲಿ ಟೇಬಲ್ ಮತ್ತು ಚೇರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ಲಾಘಿಸಿದರು.ಎಲ್ಲವನ್ನೂ ಸರ್ಕಾರದಿಂದಲೇ ಮಾಡಲು ಅಸಾಧ್ಯ, ಆದ್ದರಿಂದ ಪ್ರತೀ ವರ್ಷ ನಗರದಲ್ಲೊಂದು, ಗ್ರಾಮೀಣ ಭಾಗದಲ್ಲೊಂದು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಲು ಬೆಂಗಳೂರಿನಲ್ಲಿ ಉದ್ದಿಮೆದಾರರನ್ನು ಸಂಪರ್ಕಿಸುವುದಾಗಿ ಭರವಸೆ ನೀಡಿದರು.ಮಾತನಾಡಲು ಮಾತೃ ಭಾಷೆ ಕನ್ನಡ, ಬದುಕಲು ಆಂಗ್ಲ ಭಾಷೆ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾಲೂಕಿನಲ್ಲಿ 17 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.ಪ್ರತಿದಿನ ಶಾಲೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನದ ಪೀಠಿಕೆ ಓದಿಸಬೇಕು, ವಿಶ್ವಗುರು ಬಸವಣ್ಣ ನವರ ಒಂದು ವಚನ ಹೇಳಿಕೊಡುವ ಮೂಲಕ ಅದರ ಅರ್ಥವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಮಾತನಾಡಿ, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಾದರೂ ಒಂದು ದಿನ ಫಲ ಕೊಡುತ್ತದೆ ಎಂಬುದನ್ನು ಅರ್ಥಪೂರ್ಣಗೊಳಿಸುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಂಬೇಡ್ಕರ್, ಬಸವ ಮಾರ್ಗದ ಕ್ರಾಂತಿ ಗೀತೆ ಹಾಡಿ ರಂಜಿಸಿದರು.
ಭಾತೃತ್ವ ಭಾವನೆ ಬೆಳೆಯದಿದ್ದರೆ ಸಮಾಜದಲ್ಲಿ ಸಮಾನತೆ ಬೆಳೆಯುವುದಿಲ್ಲ, ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಇದನ್ನು ಬಿತ್ತಬೇಕು. ಅಕ್ಷರದಿಂದ ವಂಚಿತರಾಗಿದ್ದ ಸಮುದಾಯದಲ್ಲಿ ಜನಿಸಿದ ಡಾ. ಬಿ.ಆರ್. ಅಂಬೇಡ್ಕರ್ ಇಂದು ವಿಶ್ವದ ಅಗ್ರಗಣ್ಯ ನಾಯಕರಾಗಿದ್ದಾರೆಂದು ಶ್ಲಾಘಿಸಿದರು.ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಸರ್ಕಾರಿ ಶಾಲೆ ಧಮನ ಮಾಡುವ ಮಟ್ಟಕ್ಕೆ ಬೆಳೆದು ನಿಂತಿವೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಏಕಲವ್ಯನ ಹೆಬ್ಬೆರಳು ಕತ್ತರಿಸಿದಂತೆ ಆಗಬಾರದು. ಶಿಕ್ಷಣ ಎಲ್ಲರ ಸ್ವತ್ತಾಗಬೇಕೆಂದು ಹೇಳಿದರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಇದನ್ನು ರೂಢಿಸಿಕೊಂಡಾಗ ಮಾತ್ರ ಶೇ.100 ರಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಯಲಗುಡಿಗೆ ಶಾಲೆ ಶಿಕ್ಷಕಿ ಕೆ.ಎಚ್. ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಜೋಗಪ್ಪ ಸ್ವಾಗತಿಸಿದರು. 19 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನಲಿಕಲಿ ಟೇಬಲ್ ಮತ್ತು ಚೇರ್ ವಿತರಣಾ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಅವರು ಉದ್ಘಾಟಿಸಿದರು. ನ್ಯಾ. ಹನುಮಂತಪ್ಪ, ಬಿಇಓ ರುದ್ರಪ್ಪ, ಶಿಕ್ಷಕಿ ಕೆ.ಎಚ್. ಗೀತಾ ಇದ್ದರು.