ಸಾರಾಂಶ
ಒಳ ಮೀಸಲಾತಿ ನೀಡದ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಮಾದಿಗ ಜನಾಕ್ರೋಶ ಆಂದೋಲನದ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸರಕಾರದ ಅಣಕು ಶವಯಾತ್ರೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮೇಶ್ವರ: ಒಳ ಮೀಸಲಾತಿ ನೀಡದ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಮಾದಿಗ ಜನಾಕ್ರೋಶ ಆಂದೋಲನದ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸರಕಾರದ ಅಣಕು ಶವಯಾತ್ರೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ಗದಗ ನಾಕಾದ ಅಂಬೇಡ್ಕರ್ ವೃತ್ತದಿಂದ ನೂರಾರು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ಅಣಕು ಶವದೊಂದಿಗೆ ಮೆರವಣಿಗೆ ಹೊರಟು ಮಾರ್ಗದುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಶಿಗ್ಲಿ ಕ್ರಾಸ್ ಮೂಲಕ ಹೊಸ ಬಸ್ ನಿಲ್ದಾಣ ಎದುರು ರಾಜ್ಯ ಹೆದ್ದಾರಿ ತಡೆದು ಮಾನವ ಸರಪಳಿ ರಚಿಸಿ ಸರ್ಕಾರದ ಧೋರಣೆಯನ್ನು ಉಗ್ರವಾಗಿ ಖಂಡಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡ ಫಕ್ಕೀರೇಶ ಮ್ಯಾಟನವರ, ಬಸವಣ್ಣೆಪ್ಪ ನಂದೆಣ್ಣವರ, ನಾಗೇಶ ಅಮರಾಪೂರ, ಫಕ್ಕಿರೇಶ ಭಜ್ಜಕ್ಕನವರ, ಹನಮಂತಪ್ಪ ಛಬ್ಬಿ, ಮನೋಹರ ಕರ್ಜಗಿ ಅವರು ಮಾತನಾಡಿ, ಮಾದಿಗ ಜನಾಂಗದವರು ಒಳ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದಲ್ಲೂ ಹೋರಾಟ ಮಾಡುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಲಯದ ಅಭಿಪ್ರಾಯ ಕೇಳಿದಾಗ, ಒಳ ಮೀಸಲಾತಿ ನಿಗದಿಪಡಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ತೀರ್ಪು ನೀಡಿ ಒಂದು ವರ್ಷ ಕಳೆದರು, ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡುವಲ್ಲಿ ಮೀನಾಮೇಷ ಮತ್ತು ಕಾಲಹರಣ ಮಾಡುತ್ತಾ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟದಲ್ಲಿನ ಕೆಲವು ಕಾಣದ ಕೈಗಳು ಅಡ್ಡಿಪಡಿಸುತ್ತಿವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಯೋಗ ದತ್ತಾಂಶಗಳನ್ನು ಕ್ರೋಢೀಕರಿಸಿ ವರದಿ ಸಿದ್ಧಪಡಿಸಿ ಸರ್ಕಾರ ಸಲ್ಲಿಸಿದ್ದರೂ ಅದನ್ನು ಜಾರಿ ಮಾಡುವ ಮನಸ್ಸು ಮಾಡುತ್ತಿಲ್ಲ. ಸರ್ಕಾರ ಸಹ ಮೀನಾಮೇಷ ಮಾಡಿದರೆ ಮತ್ತು ದಲಿತ ಸಮಾಜದ ಸಹನೆಯನ್ನು ಕೆಣಕಿದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಆಕ್ರೋಶ ಹೊರ ಹಾಕಿದರು.ಈ ವೇಳೆ ತಹಸೀಲ್ದಾರ್ ಸಿ. ಧನಂಜಯ ಅವರು ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ನಂತರ ಮಾತನಾಡಿದ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ರಾಮು ಗಡದವರ, ರಾಮು ಅಡಗಿಮನಿ, ಫಕ್ಕಿರೇಶ ನಂದೆಣ್ಣವರ, ಬಸವಣ್ಣೆಪ್ಪ ನಂದೆಣ್ಣವರ, ದೇವಪ್ಪ ನಂದೆಣ್ಣವರ, ಸದಾನಂದ ನಂದೆಣ್ಣವರ, ಮಂಜಪ್ಪ ಸೀತಮ್ಮನವರ, ಜುಂಜಪ್ಪ ಮುದೆಣ್ಣವರ, ಕೊಟ್ಟೆಪ್ಪ ದೇವರಮನಿ, ಅಭಿಷೇಕ ದೊಡ್ಡಮನಿ, ರಾಜೇಶ ಕಮತದ, ಶೇಖಪ್ಪ ಒಂಟಿ, ಅಯ್ಯಪ್ಪಸ್ವಾಮಿ ಅಯ್ಯನವರ, ಮಾಲತೇಶ ಮಿಸಪ್ಪನವರ, ಮಂಜು ದೊಡ್ಡಮನಿ, ಮಹಾಂತೇಶ ಗುಡಸಲಮನಿ ಸೇರಿದಂತೆ ಲಕ್ಷ್ಮೇಶ್ವರ ತಾಲೂಕಿನ ಸಮಾಜದ ಮುಖಂಡರು, ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.