ಸಾರಾಂಶ
ಗದಗ: ಹಿಂದಿನ ಬಿಜೆಪಿ ಸರ್ಕಾರ ಕೊಲಂಬೊ ಸಮುದಾಯಗಳಿಗೆ ಶೇ. 4.5ರಷ್ಟು ಮೀಸಲಾತಿ ನೀಡಲು ಆದೇಶ ಮಾಡಿತ್ತು. ಅದನ್ನು ನಮ್ಮ ಜನಾಂಗ ಒಪ್ಪಿರಲಿಲ್ಲ. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ 63 ಸಮುದಾಯಗಳಿಗೆ ಕೇವಲ ಶೇ. 5ರಷ್ಟು ಮೀಸಲು ನೀಡಿದ್ದು, ಬಂಜಾರ ಜನಾಂಗಕ್ಕೆ ದ್ರೋಹ ಮಾಡಿದೆ. ಈ ಸರ್ಕಾರಕ್ಕೆ ನಮ್ಮ ಸಮುದಾಯ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತದೆ ಎಂದು ಮಾಜಿ ಶಾಸಕ ಬಸವರಾಜ ನಾಯ್ಕ ಎಚ್ಚರಿಸಿದರು.ನಗರದಲ್ಲಿ ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದರು. ಕೆಲ ಸಮುದಾಯಗಳಿಗೆ ಶೇ. 10ರಿಂದ 12ರಷ್ಟು ಮೀಸಲು ಹೆಚ್ಚಳ ನೀಡಿರುವ ಹಿಂದಿನ ಮರ್ಮವನ್ನು ನಾಗಮೋಹನದಾಸ್ ಅವರು ಬಹಿರಂಗಪಡಿಸಬೇಕು. ಕೆಲವು ಸಮುದಾಯಗಳನ್ನು ಓಲೈಕೆ ಮಾಡುವ ಉದ್ದೇಶದಿಂದಲೇ ಈ ಒಳಮೀಸಲಾತಿಯನ್ನು ಜಾರಿಗೆ ತಂದಿದ್ದು, ಇಂತಹ ಅವೈಜ್ಞಾನಿಕ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.ಮಂಜ್ಯಾ ನಾಯ್ಕ ಮಾತನಾಡಿದರು. ಬುಧವಾರ ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ಅವರ ವೇಳಾಪಟ್ಟಿಯಂತೆ ಗದಗ ತಾಲೂಕಿನ ನಾಗಾವಿ ತಾಂಡಾ, ಮುಂಡರಗಿ ತಾಲೂಕಿನ ಶಿಂಗಟರಾಯನಕೆರೆ ತಾಂಡಾ, ಶಿರಹಟ್ಟಿ ತಾಲೂಕಿನ ದೇವಿಹಾಳ ತಾಂಡಾ, ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ, ಮುನಿಯನ್ ತಾಂಡಾ, ಗಜೇಂದ್ರಗಡ ತಾಲೂಕಿನ ಜನತಾ ಪ್ಲಾಟ್ ತಾಂಡಾ, ಗಜೇಂದ್ರಗಡ ತಾಂಡಾ ಹಾಗೂ ಹಾಲಭಾವಿ ತಾಂಡಾ ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಆಗಮಿಸಿ ಧರಣಿಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ತಮ್ಮ ಹಿಂದಿನ ಕಸುಬಾದ ಭಟ್ಟಿ ಸಾರಾಯಿ ಮಾಡುವ ಅಣುಕು ಪ್ರದರ್ಶನದ ಮೂಲಕ ಸರ್ಕಾರದ ಅವೈಜ್ಞಾನಿಕ ನಡವಳಿಕೆಯನ್ನು ಖಂಡಿಸಿದರು.
ಶ್ರದ್ಧಾಂಜಲಿ: ಕಾಂಗ್ರೆಸ್ ಸರ್ಕಾರ ಬಂಜಾರ ಸಮುದಾಯದ ಪಾಲಿಗೆ ಸತ್ತಿದೆ ಎಂದು ಸಮುದಾಯದ ನಾಯಕ್, ಡಾವ್, ಕಾರಭಾರಿ ಸೇರಿ ಮೂರು ದಿನದ ಶ್ರದ್ಧಾಂಜಲಿ(ದಾಡೋ) ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸುರೇಶ ಬಳೂಟಗಿ, ಚಂದು ನಾಯ್ಕ, ಶಿವಪ್ಪ ನಾಯ್ಕ, ಪುರಪ್ಪ ನಾಯ್ಕ, ಶಿವು ನಾಯ್ಕ, ಕುಬೇರ ನಾಯ್ಕ, ಟಿಕೂ ನಾಯ್ಕ, ಐ.ಎಸ್. ಪೂಜಾರ, ಕುಬೇರಪ್ಪ ರಾಠೋಡ, ಶಿವಣ್ಣ ಲಮಾಣಿ, ಪರಮೇಶ ಲಮಾಣಿ, ಟಿ.ಡಿ. ಪೂಜಾರ, ಪರಮೇಶ ನಾಯ್ಕ, ಧನ್ನುರಾಮ ತಂಬೂರಿ, ಸುರೇಶ ಮಹಾರಾಜ, ತುಕಾರಾಮ ಲಮಾಣಿ, ಪರಶುರಾಮ ಚವಾಣ, ವಿಠ್ಠಲ ತೋಟದ, ಮೋಹನ ಲಮಾಣಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಇದ್ದರು.