ಸಾರಾಂಶ
ಜಯಪುರದಲ್ಲಿ ತಾಲೂಕು ಬಿಜೆಪಿ ಘಟಕದಿಂದ ನಡೆದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಕೊಪ್ಪರಾಜ್ಯ ಸರ್ಕಾರ ಗ್ರಾಮ ಸ್ವರಾಜ್‌ನ ಕಾಯ್ದೆಯ ಅಂಶಗಳನ್ನು ಮೊಟಕುಗೊಳಿಸುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಶುಕ್ರವಾರ ಜಯಪುರದಲ್ಲಿ ತಾಲೂಕು ಬಿಜೆಪಿ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಪಂ ಮನೆ ಕಟ್ಟಲು ನೀಡುವ ನಕ್ಷೆಯ ಅಧಿಕಾರವನ್ನು ನಗರ ಪ್ರಾಧಿಕಾರಕ್ಕೆ ನೀಡುವ ಮೂಲಕ ಸರ್ಕಾರ ಗ್ರಾಪಂ ಅಧಿಕಾರ ಕಿತ್ತುಕೊಂಡಿದೆ ಎಂದು ಆರೋಪಿಸಿದರು.
ಕೂಲಿ ಕಾರ್ಮಿಕರು ಸೇರಿದಂತೆ ಬಡವರಿಗೆ ೬೦ ವರ್ಷದ ನಂತರ ಸ್ವಾವಲಂಬಿ ಜೀವನ ನಡೆಸಲಿ ಎಂದು ಸರ್ಕಾರದಿಂದ ರಾಜ್ಯದಲ್ಲಿ ೯.೫ ಲಕ್ಷ ಜನರಿಗೆ ವೃದ್ಧಾಪ್ಯ ವೇತನ ಹಾಗೂ ೧೪ ಲಕ್ಷ ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ ನೀಡುತ್ತಾ ಬಂದಿದೆ. ಈಗಿನ ರಾಜ್ಯ ಸರ್ಕಾರ ಇದರ ಮೇಲೂ ಕಣ್ಣು ಹಾಕಿದ್ದು ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಮರುಪರಿಶೀಲನೆ ಮಾಡುವ ಮುಖಾಂತರ ಬಡವರಿಗೆ ತಲುಪಬೇಕಾದ ಹಣ ತಡೆಹಿಡಿಯುವ ಯೋಜನೆ ಮಾಡುತ್ತಿದೆ ಎಂದು ದೂರಿದರು.ರಾಜ್ಯಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗ್ರಾಪಂ ಮುಂಭಾಗದಲ್ಲೂ ಮುಂದಿನ ದಿನಗಳಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಈ ಹೋರಾಟ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ಸಿನ ವಿರುದ್ಧ ಆಗಿರದೆ ರಾಜ್ಯದ ಬಡಜನರ ಪರವಾಗಿರುತ್ತದೆ ಎಂದರು. ಕೊಪ್ಪ ತಾಲೂಕು ರೈತಮೋರ್ಚಾದ ಅಧ್ಯಕ್ಷ ಅರನೂರು ಸಂತೋಷ್ ಮಾತನಾಡಿ ರಾಜ್ಯ ಸರ್ಕಾರ ತನ್ನ ಎರಡೂವರೆ ವರ್ಷದ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ರೈತರಿಗೆ ನೀಡಬೇಕಾದ ಹಕ್ಕುಪತ್ರ ನೀಡುತ್ತಿಲ್ಲ. ಮಲೆನಾಡಿನ ರೈತರ ಸಮಸ್ಯೆಗಳಾದ ಅಡಕೆ ಕೊಳೆರೋಗ ಸಮಸ್ಯೆಗೆ ಪರಿಹಾರ ನೀಡುವುದರಲ್ಲೂ ವಿಫಲವಾಗಿದೆ ಎಂದರು. ಕೊಪ್ಪ ತಾಲೂಕು ಬಿಜೆಪಿ ಅಧ್ಯಕ್ಷ ಹೊಸೂರು ದಿನೇಶ್ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರದ ಪ್ಯಾಕೇಜ್ ಹಣ ಅಭಿವೃದ್ಧಿ ಕಾಮಗಾರಿಗಳ ಅವಶ್ಯಕತೆ ಇರುವ ಮತದಾರರಿಗೆ ತಲುಪುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರ ಮನೆಗಳಿಗೆ ತಲುಪುತ್ತಿದೆ. ರಾಜ್ಯ ಸರ್ಕಾರ ಸೌಲಭ್ಯಗಳ ಘೋಷಣೆ ಮಾಡುತ್ತಿದೆ. ಆದರೆ ಅದ್ಯಾವುದೂ ಜಾರಿ ಯಾಗುತ್ತಿಲ್ಲ ಎಂದು ದೂರಿದರು. ಜಯಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಹಾಗೂ ನಾಡಕಚೇರಿ ರೆವಿನ್ಯೂ ಇನ್ಸ್ಪೆಕ್ಟರ್ ವಿನಯ್ ಮುಖಾಂತರ ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮೇಗುಂದ ಹೋಬಳಿ ಬಿಜೆಪಿ ಅಧ್ಯಕ್ಷ ಕಾರ್ತಿಕ್, ಜಯಪುರ ಗ್ರಾಪಂ ಅಧ್ಯಕ್ಷ ಕರುಣಾಕರ್, ಉಪಾಧ್ಯಕ್ಷೆ ಜಯ ಮುರುಗೇಶ್, ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಸದಸ್ಯರಾದ ಶ್ರೀನಿವಾಸ್, ಪ್ರವೀಣ್, ಶಕುಂತಳಮ್ಮ, ರಮ್ಯ, ಕೊಪ್ಪ ತಾಲೂಕು ಬಿಜೆಪಿ ವಕ್ತಾರ ಎಚ್.ಆರ್. ಜಗದೀಶ್ ನುಗ್ಗಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.