ರಾಜ್ಯ ಸರ್ಕಾರದಿಂದ ಜನರ ದಾರಿ ತಪ್ಪಿಸುವ ಕೆಲಸ: ಶಾಸಕ ಮಹೇಶ ಟೆಂಗಿನಕಾಯಿ

| Published : Mar 20 2025, 01:18 AM IST

ರಾಜ್ಯ ಸರ್ಕಾರದಿಂದ ಜನರ ದಾರಿ ತಪ್ಪಿಸುವ ಕೆಲಸ: ಶಾಸಕ ಮಹೇಶ ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟರೆ ಅಭಿವೃದ್ಧಿ ಪರವಾಗಿ ಏನೂ ಮಾಡಿಲ್ಲ. ಬಜೆಟ್‌ನಲ್ಲಿ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿದರು.

ಹುಬ್ಬಳ್ಳಿ: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನವನ್ನು ಮರೆಮಾಚಿ ಇದು ಕೇವಲ ರಾಜ್ಯದ ಅನುದಾನ ಎಂದು ಜನರ ದಾರಿ ತಪ್ಪಿಸುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿದರು.ಮಹದಾಯಿ ಕುರಿತು ಕೇಂದ್ರದ ಅನುಮತಿಗಾಗಿ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳೇನು ಎಂದು ಅವರು ಪ್ರಶ್ನಿಸಿದ್ದಾರೆ.

ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಈ ಸಲದ ಬಜೆಟ್‌ ಜನ, ರೈತ ಹಾಗೂ ಅಭಿವೃದ್ಧಿ ವಿರೋಧಿಯಾಗಿದೆ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟರೆ ಅಭಿವೃದ್ಧಿ ಪರವಾಗಿ ಏನೂ ಮಾಡಿಲ್ಲ. ಬಜೆಟ್‌ನಲ್ಲಿ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ಕೊಡುತ್ತಿರುವ ಅನುದಾನವನ್ನು ಮರೆಮಾಚಿ ರಾಜ್ಯ ಸರ್ಕಾರದ ಅನುದಾನವೆಂದು ದಾರಿತಪ್ಪಿಸುವ ಕಾರ್ಯ ಮಾಡುತ್ತಿದೆ. 5 ಕೆಜಿ ಉಚಿತ ಅಕ್ಕಿ ಯೋಜನೆ, ಜಲಜೀವನ್‌ ಮಿಷನ್‌, ಉದ್ಯೋಗ ಖಾತ್ರಿ ಯೋಜನೆ, ಸ್ಮಾರ್ಟ್‌ ಸಿಟಿ, ಅಮೃತನಗರ ಯೋಜನೆ ಹೀಗೆ ಹಲವಾರು ಯೋಜನೆಗಳಿವೆ. ಕನಿಷ್ಟ ಇವು ಕೇಂದ್ರದ ಯೋಜನೆಗಳು ಎಂದು ಜನರಿಗೆ ತಿಳಿಸಬಹುದು. ಆದರೆ, ರಾಜ್ಯ ಸರ್ಕಾರ ತನ್ನ ಯೋಜನೆಗಳೆಂಬಂತೆ ಬಿಂಬಿಸುತ್ತಿದೆ ಎಂದರು.

ಮಹದಾಯಿ ಕುರಿತು ಕೇಂದ್ರದ ಅನುಮತಿಗಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳೇನು?. ಈ ದಿಸೆಯಲ್ಲಿ ಇಡುತ್ತಿರುವ ಹೆಜ್ಜೆಗಳೇನು?. ಸಂಘರ್ಷ ಬಿಟ್ಟು ಸಮಾಧಾನ ಕಂಡುಕೊಳ್ಳಲು ಆಗದೇ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಮಿತಿಮೀರಿದೆ. ಮಹಾನಗರ ಎನಿಸಿಕೊಳ್ಳುವ ಹು-ಧಾ, ಬೆಳಗಾವಿ ಸೇರಿ ಎಲ್ಲ ನಗರ, ಪಟ್ಟಣಗಳು ಬರುವ ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸಲಿವೆ. ನಿರಂತರ ನೀರು ಪೂರೈಕೆ ಯೋಜನೆಯಡಿ ಆಯ್ಕೆಯಾಗಿರುವ ಬೆಳಗಾವಿ, ಹು-ಧಾ ನಗರಕ್ಕೆ ಜೂನ್‌ನಿಂದ ಪ್ರಯೋಜನ ದೊರೆಯಲಿದೆ ಎಂಬುದಾಗಿ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದೆ. ಆದರೆ ಹು-ಧಾ ಮಹಾನಗರದ ಕಾಮಗಾರಿ ಗಮನಿಸಿದರೆ ಇದು ಸಾಧ್ಯವಿಲ್ಲ ಎನಿಸುತ್ತಿದೆ. ಈ ಕಾಮಗಾರಿ ನಿರ್ವಹಿಸುತ್ತಿರುವ ಎಲ್‌ಆ್ಯಂಡ್‌ಟಿ ಸ್ಥಳೀಯ ಆಡಳಿತಗಳ ಜತೆಗೆ ಸಮನ್ವಯ ಸಾಧಿಸುತ್ತಿಲ್ಲ. ಪರಸ್ಪರ ಸಮನ್ವಯ ಇಲ್ಲದಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ ಎಂದು ಆರೋಪಿಸಿದರು.

ಹು-ಧಾ ಸೇರಿ ಎಲ್ಲೆಡೆ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಅಪರಾಧ ನಿಯಂತ್ರಣಕ್ಕೆ ಬರುತ್ತಿಲ್ಲ. ಬಿಆರ್‌ಟಿಎಸ್‌ ಸಂಪೂರ್ಣ ಹಳ್ಳಹಿಡಿದಿದ್ದು, ನಿರ್ವಹಣೆ ಕೊರತೆಯಿಂದಾಗಿ ಬಸ್‌ಗಳೆಲ್ಲ ಹಾಳಾಗಿವೆ. ಫ್ಲೈಓವರ್‌ ಕಾಮಗಾರಿಯಲ್ಲಿ ಸಮನ್ವಯತೆಯ ಕೊರತೆಯಿಂದಾಗಿ ಕುಂಟುತ್ತಾ ಸಾಗಿದೆ ಹೀಗೆ ಹತ್ತಾರು ಸಮಸ್ಯೆಗಳು ಇಂದಿಗೂ ಜೀವಂತವಾಗಿದ್ದು, ಸರ್ಕಾರ ಆದಷ್ಟು ಬೇಗನೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದರು.ಹಳೇ ಹುಬ್ಬಳ್ಳಿ ಗಲಭೆ ಹಿಂದಕ್ಕೆ: ಸದನದಲ್ಲಿ ಟೆಂಗಿನಕಾಯಿ ಆಕ್ರೋಶ

ಹುಬ್ಬಳ್ಳಿ:

ಹಳೇ ಹುಬ್ಬಳ್ಳಿ ಗಲಭೆಯಲ್ಲಿನ ಆರೋಪಿಗಳ ಮೇಲಿನ ಕೇಸ್‌ನ್ನು ವಾಪಸ್‌ ಪಡೆದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಮಹೇಶ ಟೆಂಗಿನಕಾಯಿ, ಸರ್ಕಾರ ಯಾವ ಸಂದೇಶ ರವಾನಿಸಲು ಹೊರಟಿದೆ? ಎಂದು ಪ್ರಶ್ನಿಸಿದರು.

ಸದನದಲ್ಲಿ ನಿಯಮ 69ರ ಅನ್ವಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸರ ಮೇಲೆ ಹಲ್ಲೆ ನಡೆಸಿದ, ಪೊಲೀಸ್‌ ಕಮಿಷನರ್‌ ಅವರ ವಾಹನ ಜಖಂ ಮಾಡಿ ಗಲಭೆ ಮಾಡಿದವರ ಕೇಸ್‌ ಹಿಂದಕ್ಕೆ ಪಡೆಯುತ್ತಾರೆ ಎಂದರೆ ಪೊಲೀಸರಿಗೆ ಧೈರ್ಯ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.

ಹಳೇಹುಬ್ಬಳ್ಳಿ ಗಲಭೆ ಕೇಸ್‌ ಹಿಂಪಡೆದಿದ್ದರೆ ಉದಯಗಿರಿಯಲ್ಲಿನ ಕೇಸ್‌ ಆಗುತ್ತಿರಲಿಲ್ಲ. ಆದರೆ ಈ ಸರ್ಕಾರ ಹಳೇ ಹುಬ್ಬಳ್ಳಿ ಕೇಸ್‌ ಹಿಂಪಡೆದಿದ್ದು ಹೇಗೆ? ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ? ಎಂದು ಪ್ರಶ್ನಿಸಿದರು.