ಸಾರಾಂಶ
ಬ್ಯಾಡಗಿ: ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ರೈತರ ಪ್ರತಿ ಎಕರೆಗೆ ರು. 3400 ರಂತೆ ಹಣ ಬಿಡುಗಡೆಗೊಳಿಸದಿದ್ದರೆ ನ್ಯಾಯಾಲಯದ ಒಳಗೂ ಹಾಗೂ ಹೊರಗೂ ಹೋರಾಟ ನಡೆಸುವುದು ನಿಶ್ಚಿತ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರ ತನ್ನ ಪಾಲಿನ ಎನ್‌ಡಿಆರ್‌ಎಫ್ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆಗೊಳಿಸಿದ್ದಾರೆ. ಆದರೆ ಸದರಿ ಪರಿಹಾರದ ಮೊತ್ತವನ್ನು ತಮ್ಮದೇ ಎನ್ನುವಂತೆ ಬೀಗುತ್ತಿರುವ ರಾಜ್ಯ ಸರ್ಕಾರ ತನ್ನ ಪಾಲಿನ (ಎಸ್‌ಡಿಆರ್‌ಎಫ್) ಮೊತ್ತದ ಬಿಡಿಗಾಸನ್ನು ನೀಡಿಲ್ಲ. ರೈತರ ಬಗ್ಗೆ ಬದ್ಧತೆಯಿಲ್ಲದ ರಾಜ್ಯ ಸರ್ಕಾರ ಮೋಸ ಎಸಗುತ್ತಿದೆ ಎಂದರು.ಅಲ್ಲಿದ್ದ ತೋರಿದ ಬದ್ಧತೆ ಇಲ್ಲೇಕಿಲ್ಲ: ಎಸ್.ಡಿ.ಆರ್.ಎಫ್. ತಮ್ಮ ಪಾಲಿನ ಹಣ ಬಿಡುಗಡೆ ಮಾಡದೇ ಎನ್‌ಡಿಆರ್‌ಎಫ್ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ರಾಜ್ಯ ಸರ್ಕಾರ ಅಲ್ಲಿ ತೋರಿದ್ದ ಬದ್ಧತೆಯನ್ನು ಇಲ್ಲೇಕೆ ತೋರುತ್ತಿಲ್ಲ? ಎಂದು ಪ್ರಶ್ನಿಸಿದ ಅವರು, ರೈತ ಸಂಘವು ಕೂಡ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾಗಿದೆ ಎಂದರು.
ಅರ್ಜಿ ಸಲ್ಲಿಸುತ್ತಿಲ್ಲ ಎನ್ನುತ್ತಿರುವ ಮುಖ್ಯಮಂತ್ರಿ:ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಹಣ ಬಿಡುಗಡೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಖುದ್ದಾಗಿ ಮತ್ತು ಸುಮಾರು 25 ಸಾವಿರಕ್ಕೂ ಅಧಿಕ ರೈತರು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದೇವೆ ಅದಾಗ್ಯೂ ಮಾಧ್ಯಮಗಳೆದುರು ರೈತರು ಅರ್ಜಿ ಸಲ್ಲಿಸಿಲ್ಲ ಎಂದು ಸುಳ್ಳು ಹೇಳುತ್ತಿರುವುದು ಅವರ ಘನತೆಗೆ ತಕ್ಕುದಲ್ಲ ಎಂದರು.ಘೋಷಣೆ ಬಳಿಕ ಅರ್ಜಿ ಏಕೆ..?:ಬರಗಾಲ ಪೀಡಿತವೆಂದು ತಾವೇ ಘೋಷಿಸಿದ ಬಳಿಕ ರೈತರು ಅರ್ಜಿ ಸಲ್ಲಿಸುವ ಪ್ರಮೇಯ ಬರುವುದಿಲ್ಲ. ಆದರೆ ಮುಖ್ಯಮಂತ್ರಿಗಳು ಇಂತಹ ಬೇಜವಾಬ್ದಾರಿ ಹೇಳಿಕೆಗಳು ರೈತರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಅರ್ಜಿ ಸಲ್ಲಿಸಲು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.
ಪ್ರತಿಭಟನೆಯೊಂದಿಗೆ ಅರ್ಜಿ ಸಲ್ಲಿಸೋಣ ಬನ್ನಿ:ತಾಲೂಕಿನ ಸಾವಿರಾರು ಸಂಖ್ಯೆಯ ಕಾರ‍್ಯಕರ್ತರು ಮೇ 13 ರಂದು ಬೆಳಗ್ಗೆ 10 ಗಂಟೆಗೆ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ ಕಾರ್ಯಾಲಯಕ್ಕೆ ಸಾಮೂಹಿಕವಾಗಿ ತೆರಳಿ ಅರ್ಜಿ ಸಲ್ಲಿಸಲಾಗುವುದು ಕಾರಣ ಪರಿಹಾರ ಬಾರದಿರುವ ಅಥವಾ ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ಜಮೆ ಆಗಿರುವ ರೈತರು ಅರ್ಜಿ ಸಲ್ಲಿಸಲು ಪಹಣಿಪತ್ರ ಮತ್ತು ಬ್ಯಾಂಕ್ ಖಾತೆ ಪಾಸ್ ಬುಕ್ ಝರಾಕ್ಸದೊಂದಿಗೆ ಆಗಮಿಸಲು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.ಈ ವೇಳೆ ರೈತ ಮುಖಂಡ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಕಿರಣ ಗಡಿಗೋಳ ಪ್ರಕಾಶ ಸಿದ್ದಪ್ಪನವರ, ಜಾನ್ ಪುನೀತ್, ಮೌನೇಶ ಕಮ್ಮಾರ, ಶಂಕರ ಮರಗಾಲ, ಸಂಜೀವ ಬಿಷ್ಟಂಡನವರ, ಬಸವರಾಜ ಕುಮ್ಮೂರ, ಚಂದ್ರಪ್ಪ ದೇಸಾಯಿ, ಪ್ರವೀಣ ಹೊಸಗೌಡ್ರ, ಮಲಕಪ್ಪ ಶಿಡೇನೂರ ಇನ್ನಿತರರಿದ್ದರು.