ರಾಜ್ಯ ಸರ್ಕಾರ ಕೋವಿಡ್‌ ಎದುರಿಸಲು ಸಿದ್ಧ: ಶಾಸಕ ಆರ್‌.ವಿ. ದೇಶಪಾಂಡೆ

| Published : May 26 2025, 11:46 PM IST / Updated: May 26 2025, 11:47 PM IST

ಸಾರಾಂಶ

ಕೋವಿಡ್ ಉಪ ತಳಿಯು ಅಷ್ಟೇನೂ ಅಪಾಯಕಾರಿ ಅಲ್ಲ. ಅದಕ್ಕಾಗಿ ಯಾರೂ ಭಯಪಡುವ ಅವಶ್ಯಕತೆಯಿಲ್ಲ.

ಹಳಿಯಾಳ: ಕೋವಿಡ್ ಉಪ ತಳಿಯು ಅಷ್ಟೇನೂ ಅಪಾಯಕಾರಿ ಅಲ್ಲ. ಅದಕ್ಕಾಗಿ ಯಾರೂ ಭಯಪಡುವ ಅವಶ್ಯಕತೆಯಿಲ್ಲ. ರಾಜ್ಯ ಸರ್ಕಾರ ಕೋವಿಡ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.ಸೋಮವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡಿದರು.

ಈ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಆದಷ್ಟು ಮಾಸ್ಕ್‌ಗಳನ್ನು ಧರಿಸಬೇಕು. ತಾವು ವಾಸಿಸುವ ಮನೆ, ಸುತ್ತಲಿನ ಪರಿಸರ ಶುಚಿಯಾಗಿಡಲು ಹೆಚ್ಚಿನ ಗಮನಹರಿಸಬೇಕು ಎಂದರು.

ಸಾರ್ವಜನಿಕರು ಆದಷ್ಟು ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು, ಬಿಸಿ ನೀರನ್ನು ಬಳಕೆ ಮಾಡಬೇಕು, ಆರೋಗ್ಯ ಸಮಸ್ಯೆ ಎದುರಾದಲ್ಲಿ ತಕ್ಷಣ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

ಆರೋಗ್ಯ ಸಭೆ:

ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೂರು ತಾಲೂಕುಗಳಲ್ಲಿನ ಸರ್ಕಾರ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ವ ಆರೋಗ್ಯ ಇಲಾಖೆ ಸಿಬ್ಬಂದಿ ಸಜ್ಜಾಗಿರಲು ಸೂಚಿಸಿದ್ದೇನೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋವಿಡ್ ವಾರ್ಡಗಳನ್ನು ನಿರ್ಮಾಣ ಮಾಡಲಾಗಿದ್ದು, ಕೋವಿಡ್ ಸಂಬಂಧಿಸಿದ ಔಷಧಿಗಳು ಆಸ್ಪತ್ರೆಯಲ್ಲಿ ಲಭ್ಯ ಇವೆ. ಕೋವಿಡ್ ಪರೀಕ್ಷೆ ನಡೆಸಲು ಎಲ್ಲ ಸೌಲಭ್ಯಗಳು ಆಸ್ಪತ್ರೆಯಲ್ಲಿ ಇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಇದ್ದರು.