ಸಾರಾಂಶ
ನೂತನ ಸಂಸದರು, ವಿಧಾನಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಸಿ.ಟಿ. ರವಿ ವಾಗ್ದಾಳಿ
ವಾಲ್ಮೀಕಿ ನಿಗಮದ 187 ಕೋಟಿ ರು. ನಕಲಿ ಖಾತೆಗೆ ವರ್ಗಾವಣೆ ಬಗ್ಗೆ ಸಿಎಂ ನೈತಿಕ ಹೊಣೆ ಹೋರಲಿಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ವೀಪರೀತವಾಗಿ ಹೆಚ್ಚಿದ್ದು ಜನಪ್ರತಿನಿಧಿಗಳು ಸ್ಪಂದಿಸಿಲ್ಲವೆಂದು ಆಕ್ಷೇಪಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆಗೆ ಸ್ಪಂದಿಸದೇ ಪಿಕ್‌ನಿಕ್‌ಗೆಂಬಂತೆ ಬಂದು ಹೋಗುತ್ತಾರೆಂದು ಆರೋಪ
ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ಆತ್ಮಹತ್ಯೆ ಮತ್ತು ಹತ್ಯೆಯಲ್ಲಿ ರಾಜ್ಯ ಸರ್ಕಾರ ದಾಖಲೆ ನಿರ್ಮಾಣ ಮಾಡಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನೂತನ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಂಡವಾಳ ಹೂಡಿಕೆಯಲ್ಲಿ ದಾಖಲೆ ನಿರ್ಮಾಣವಾಗಿತ್ತು. ಆದರೆ, ಇದೀಗ ಆತ್ಮಹತ್ಯೆ ಮತ್ತು ಹತ್ಯೆಯಲ್ಲಿ ದಾಖಲೆ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ನಿರಾಸಕ್ತಿ ಪರಿಣಾಮ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ವೇಗ ಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರುಪಾಯಿ ನಕಲಿ ಖಾತೆಗೆ ವರ್ಗಾವಣೆ ಆಗಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಸಚಿವ ನಾಗೇಂದ್ರ ಮಾತ್ರವಲ್ಲ ಮುಖ್ಯಮಂತ್ರಿಯವರು ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.ಚಿಕ್ಕಮಗಳೂರು ತಾಲೂಕಿನಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಜ್ವರ ಪೀಡಿತ ರೋಗಿಗಳಿಂದ ಆಸ್ಪತ್ರೆ ಭರ್ತಿಯಾಗಿದೆ. ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರೀಯ ಹಬ್ಬಗಳಿಗೆ ಬಂದು ಧ್ವಜಾರೋಹಣ ನೆರವೇರಿಸಿ ತೆರಳುತ್ತಿದ್ದಾರೆ. ಇಲ್ಲಿರುವ ಅವರ ತೋಟಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಆರೋಪಿಸಿದ ಸಿ.ಟಿ. ರವಿ, ಸಚಿವರು ಇಲ್ಲಿಗೆ ಬರುವುದು ಪಿಕ್‌ನಿಕ್‌ಗೆ ಅಂದುಕೊಂಡಿದ್ದಾರೆ ಎಂದು ಆರೋಪಿಸಿದರು.
ಕೊಬ್ಬರಿ ಬೆಳೆಗಾರರ ಬಗ್ಗೆ ರಾಜ್ಯ ಸರ್ಕಾರ ಮಾತನಾಡುತ್ತಿಲ್ಲ, ಮಳೆ ಬಂದರೂ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂದು ಹೇಳಿದರು.ಕಾಲದ ಸಾಮರ್ಥ್ಯದ ಮುಂದೆ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಕಾರ್ಯಕರ್ತರಿಗೆ ವಿಶ್ವಾಸ ತುಂಬುವ ಕೆಲಸ ಆಗಬೇಕಾಗಿದೆ. ಅನ್ಯಾಯವಾಗಲು ಬಿಡುವುದಿಲ್ಲ, ನಮ್ಮ ಮುಂದೆ ಬಹಳಷ್ಟು ಸವಾಲುಗಳಿವೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪಕ್ಷಗಳ ನಡುವೆ ಹೊಂದಾಣಿಕೆ 1983 ರಿಂದಲೂ ನಡೆಯುತ್ತಾ ಬಂದಿದೆ. ಹೊಂದಾಣಿಕೆ ನಾಯಕರ ಮಟ್ಟದಲ್ಲಿ ನಡೆದರೆ ಪ್ರಯೋಜನ ಇಲ್ಲ, ಕಾರ್ಯಕರ್ತರ ಮಟ್ಟದಲ್ಲಿ ಆಗಬೇಕು. ಈ ಬಾರಿ ಕಾರ್ಯಕರ್ತರ ಹೃದಯಾಂತರಾಳದಲ್ಲಿ ಆಗಿತ್ತು. ಹಾಗಾಗಿ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಗೆಲ್ಲಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲೂ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ ಎಂದರು.ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ನಮ್ಮ ನಡವಳಿಕೆ ಮುಖ್ಯವಾಗಿರುತ್ತದೆ. ಯಾವತ್ತೂ ಕೂಡ ಜನರ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಸೋಲು ನೂರಾರು ಪಾಠ ಕಲಿಸುತ್ತದೆ. ಗೆಲುವು ಆ ರೀತಿಯ ಪಾಠ ಕಲಿಸುವುದಿಲ್ಲ, ಯಾವುದೇ ಸಮಸ್ಯೆ ಬಂದರೂ ಸಾಮರಸ್ಯದಿಂದ ಬಗೆಹರಿಸೋಣ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಭರವಸೆಯ ನಡುವೆಯೂ ಪಕ್ಷದ ಕಾರ್ಯಕರ್ತರು ಗೆಲುವು ತಂದು ಕೊಟ್ಟಿದ್ದಾರೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು. ಸಂಘಟನೆಯ ಶಕ್ತಿಯೇ ಕಾರ್ಯಕರ್ತರು. ನಿಷ್ಠಾವಂತ ಕಾರ್ಯಕರ್ತರನ್ನು ಯಾವತ್ತೂ ಕೈಬಿಡಬಾರದು ಎಂದರು.ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ಮಾತು ಸಾಧನೆ ಆಗಬಾರದು. ಸಾಧನೆ ಮಾತಾಗಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು ಕಾರ್ಯಕರ್ತರಿಗೆ ಅಗ್ನಿ ಪರೀಕ್ಷೆ ಎಂದು ಕಿವಿ ಮಾತು ಹೇಳಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಪಕ್ಷದ ಕಾರ್ಯಕರ್ತರ ಉತ್ಸಾಹ ನೋಡಿ ಗೆಲುವು ಖಚಿತ ಅನಿಸಿತು. ಹಾಗೆಯೇ ಆಯಿತು ಎಂದರು.ಜನ ತಂತ್ರ ವ್ಯವಸ್ಥೆಯಲ್ಲಿ ಜನರೇ ಶ್ರೇಷ್ಠ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಪ್ರಮಾಣ ವಚನಕ್ಕೂ ಮುನ್ನ ಸಂವಿಧಾನಕ್ಕೆ ಹಣೆ ಇಟ್ಟು ನಮಸ್ಕಾರ ಮಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆ ಎಂಬುದನ್ನು ತಳ ಸಮುದಾಯದವರು ಯೋಚಿಸಬೇಕು ಎಂದು ಹೇಳಿದರು.
ಇದು ವಿಭಿನ್ನ ಕ್ಷೇತ್ರ. ಭೌಗೋಳಿಕವಾಗಿ ಸಮಸ್ಯೆಗಳು ಬೇರೆ ಬೇರೆ ಇವೆ. ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರವನ್ನು ಕಂಡುಕೊಳ್ಳಲಾಗುವುದು. ಕೇಂದ್ರದ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.