ಭಾಗ್ಯಗಳ ಪೂರ್ಣ ಪ್ರಮಾಣದಲ್ಲಿ ಜಾರಿಯೂ ಆಗದೆ ಅತ್ತ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವುದರ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯತ್ತ ಕೊಂಡೊಯುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಶಿರಾ
ರಾಜ್ಯದ ಕಾಂಗ್ರೆಸ್ ಸರ್ಕಾರವು ರೈತರ ಮೇಲೆ ಎಲ್ಲಾ ರೀತಿಯಲ್ಲೂ ಬೆಲೆಗಳನ್ನು ಹೆಚ್ಚಿಸುವ ಮೂಲಕ ರೈತರ ಮೇಲೆ ದೌರ್ಜನ್ಯ ಹಾಗೂ ಅನ್ಯಾಯ ಎಸಗುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿ ಮಧುಗಿರಿ ಸಂಘಟನಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ ಆರೋಪಿಸಿದರು. ಅವರು ಶುಕ್ರವಾರ ಭಾರತೀಯ ಜನತಾ ಪಾರ್ಟಿ ಮಧುಗಿರಿ ಸಂಘಟನಾ ಜಿಲ್ಲೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಾಧನೆ ದರಗಳನ್ನು ಹೆಚ್ಚಿಸುವುದೇ ಆಗಿದೆ. ವಿದ್ಯುತ್ ದರ, ನಂದಿನಿ ಹಾಲಿನ ದರ, ರೈತರ ಜಮೀನಿಗೆ ಹಾಕುವ ಟ್ರಾನ್ಸ್‌ಫಾರ್ಮಾರ್ ದರ, ಮುದ್ರಾಂಕ ಶುಲ್ಕ, ಪಹಣಿ ಶುಲ್ಕ, ಜನನ ಮತ್ತು ಮರಣ ಪ್ರಮಾಣ ಪತ್ರ ಶುಲ್ಕ, ಛಾಪಾ ಕಾಗದದ ಬೆಲೆ ಏರಿಕೆ ಸೇರಿದಂತೆ ರೈತರು, ಸಾರ್ವಜನಿಕರು ಉಪಯೋಗಿಸುವ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಸಿರುವುದೇ ಸರಕಾರದ ಸಾಧನೆಯಾಗಿದೆ. ರಾಜ್ಯ ಸರಕಾರದ ಸಾರ್ವಜನಿಕ ರೈತರ ವಿರೋಧಿ ನೀತಿಗಳಿಂದ ರಾಜ್ಯದ ಜನತೆಯು ಜೀವನ ನಡೆಸುವುದೇ ಕಷ್ಟವಾಗಿದೆ. ಇತ್ತ ಭಾಗ್ಯಗಳ ಪೂರ್ಣ ಪ್ರಮಾಣದಲ್ಲಿ ಜಾರಿಯೂ ಆಗದೆ ಅತ್ತ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವುದರ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯತ್ತ ಕೊಂಡೊಯುತ್ತಿದೆ ಎಂದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಮಾತನಾಡಿ, ಎನ್‌ಡಿಎ ಪಕ್ಷದ ವತಿಯಿಂದ ರಾಜ್ಯದ ಜನರ ಹಿತದೃಷ್ಟಿಯಿಂದ ಈಗಾಗಲೇ ಹಲವಾರು ಹೋರಾಟಗಳನ್ನು ಮಾಡಿದೆ. ಆದರೂ ಸಹ ಈ ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು ಕಿವಿ ಎರಡೂ ಇಲ್ಲದಂತಾಗಿದೆ. ಇನ್ನಾದರೂ ರಾಜ್ಯದ ಜನರ ಹಿತದೃಷ್ಟಿಯಿಂದ ದಿನ ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆಯನ್ನು ತಗ್ಗಿಸಬೇಕು. ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮಧುಗಿರಿ ಸಂಘಟನಾ ಜಿಲ್ಲೆಯ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಗಿದ್ದು, ಬರೀ ಕುರ್ಚಿ ಕಾಳಗದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರೈತರ ಮತ್ತು ಸಾರ್ವಜನಿಕರ ಅಭಿವೃದ್ಧಿ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಶಿರಾ ತಾಲೂಕಿನಲ್ಲಿನ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದರು. ಪ್ರತಿಭಟನೆಗೂ ಮುನ್ನ ಪ್ರತಿಭಟನಾ ಮೆರವಣಿಗೆಯು ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಹೊರಟು ತಾಲೂಕು ಆಡಳಿತ ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಅಧ್ಯಕ್ಷ ಈರಣ್ಣ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಉಮಾ ವಿಜಯರಾಜ್, ಜಿಲ್ಲಾ ಓ ಬಿ ಸಿ ಅಧ್ಯಕ್ಷರಾದ ಮಾಗೋಡು ಪ್ರತಾಪ್, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಅಂತಪುರ ಮಂಜುನಾಥ್, ತಾ.ಪಂ. ಮಾಜಿ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ರೈತ ಮೋರ್ಚಾ ಅಧ್ಯಕ್ಷರಾದ ಮದ್ದೆವಳ್ಳಿ ರಾಮಕೃಷ್ಣಪ್ಪ, ನಗರ ರೈತ ಮೋರ್ಚಾ ಅಧ್ಯಕ್ಷರಾದ ಬಸವರಾಜು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮು ಮೂಗನಹಳ್ಳಿ, ತಾಲೂಕು ಉಪಾಧ್ಯಕ್ಷರಾದ ನಾಗರಾಜ್ ಗೌಡ ಹಾಗೂ ಬೊಪ್ಪರಾಯಪ್ಪ, ನಗರಸಭೆ ಮಾಜಿ ಸದಸ್ಯರಾದ ನಟರಾಜ್ ಸಂತೆಪೇಟೆ, ತರೂರು ಬಸವರಾಜು ಭಾಗವಹಿಸಿದ್ದರು.೨೮ಶಿರಾ೧: ಶಿರಾದಲ್ಲಿ ಬಿಜೆಪಿ ಮಧುಗಿರಿ ಸಂಘಟನಾ ಜಿಲ್ಲೆಯ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.