ಸಾರಾಂಶ
ಶಿಗ್ಗಾಂವಿ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಸುಮಾರು ಶೇ. ೭೦ರಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಹೆಚ್ಚಿನ ಆದ್ಯತೆ ನೀಡಿದೆ ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ತಿಳಿಸಿದರು.ತಾಲೂಕಿನ ಬಂಕಾಪುರ ಪಟ್ಟಣದ ಅರಳೆಲೆಮಠದ ಆವರಣದಲ್ಲಿ ನಡೆದ ೭ನೇ ಸುತ್ತಿನ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ, ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಕ್ಷೇತ್ರದ ಮೇಲೆ ಎಲ್ಲ ಕ್ಷೇತ್ರಗಳು ಅವಲಂಬಿತವಾಗಿವೆ. ಹೀಗಾಗಿ ಕೃಷಿ ಕ್ಷೇತ್ರವನ್ನು ಬಲಪಡಿಸುವ ಮೂಲಕ ಆಹಾರದ ಕೊರತೆ ನೀಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಆರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ. ಪಶು ಇಲಾಖೆ ಸಿಬ್ಬಂದಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಲಸಿಕೆ ಹಾಕುವರು. ಈ ಮೂಲಕ ರೋಗ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪತಹಸೀಲ್ದಾರ್ ವೆಂಕಟೇಶ ಕುಲಕರ್ಣಿ, ಶಿಗ್ಗಾಂವಿ ತಾಲೂಕು ಪಶು ಆಸ್ಪತ್ರೆಯ ಮುಖ್ಯಪಶು ವೈದ್ಯಾಧಿಕಾರಿ ಆಡಳಿತ ಕೆ.ಆರ್. ಹೊಸಮನಿ, ಹಿರಿಯ ಪಶುವೈದ್ಯಾಧಿಕಾರಿ ರಾಜೇಂದ್ರ ಅರಳೇಶ್ವರ, ಜಾನುವಾರು ಅಧಿಕಾರಿ ಸಿ.ಡಿ. ಯತ್ನಳ್ಳಿ, ಜಾನುವಾರ ಪರೀಕ್ಷಕ ಸಿ.ಬಿ. ಅಳವಂಡಿ, ಮುಖಂಡ ಗುಡ್ಡಪ್ಪ ಜಲದಿ ಇತರರು ಇದ್ದರು.ತಾರತಮ್ಯ ಮಾಡದೇ ಸ್ವಚ್ಛತೆಗೆ ಆದ್ಯತೆ ನೀಡಿ
ಶಿಗ್ಗಾಂವಿ: ಪಟ್ಟಣದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಂದು ಓಣಿಗಳಲ್ಲಿನ ಚರಂಡಿಗಳ ಸ್ವಚ್ಛವಾಗಬೇಕು. ಅಲ್ಲದೆ ಮೂಲ ಸೌಕರ್ಯಗಳನ್ನು ನೀಡಲು ಬದ್ಧರಾಗಿದ್ದೇವೆ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ತಿಳಿಸಿದರು.ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಟ್ಟಣದ ಕೆಲವು ಓಣಿಗಳು ಸ್ವಚ್ಛವಾಗಿವೆ. ಇನ್ನೂ ಕೆಲವು ಬಡವರು ವಾಸಿಸುವ ಓಣಿಗಳಲ್ಲಿ ಚರಂಡಿಗಳು ಕೊಳಚೆ ನೀರು ಮುಂದೆ ಸಾಗುತ್ತಿಲ್ಲ. ಕಸದ ರಾಶಿ ತುಂಬಿ ಗಬ್ಬು ವಾಸನೆ ಹರಡಿದೆ. ಅದರಲ್ಲಿಯೇ ಬಡಜನತೆ ವಾಸವಾಗಿದ್ದಾರೆ. ಅದರಲ್ಲಿ ತಾರತಮ್ಯ ಬೇಡ. ಪ್ರತಿ ಓಣಿಗಳಲ್ಲಿ ಅಧಿಕಾರಿಗಳು ನಿಂತು ಸ್ವಚ್ಛತೆ ಮಾಡಿಸಬೇಕು ಎಂದರು.
ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ವಿದ್ಯುತ್ ಕಂಬದಲ್ಲಿನ ಟಿಸಿಗಳನ್ನು ತಕ್ಷಣ ಸ್ಥಳಾಂತರಿಸಬೇಕು. ಜನರ ಪ್ರಾಣಕ್ಕೆ ಕುತ್ತು ತರುವ ಟಿಸಿಗಳನ್ನು ಬೇರೆಡೆ ಹಾಕಬೇಕು. ಜನರ ಸಂರಕ್ಷಣೆ ಬಹಳ ಮುಖ್ಯವಾಗಿದೆ. ಹೆಸ್ಕಾಂ ಅಧಿಕಾರಿಗಳು ಇಂತಹವುಗಳನ್ನು ಗಮನಿಸಬೇಕು. ಜನರಿಗೆ ತೊಂದರೆ ಆಗಬಾರದು. ತಾಲೂಕಿನ ಎಲ್ಲ ಗ್ರಾಮದಲ್ಲಿನ ವಿದ್ಯುತ್ ಟಿಸಿಗಳನ್ನು ಪರಿಶೀಲನೆ ನಡೆಸಿ ಸ್ಥಾಳಾಂತರಿಸುವ ಕಾರ್ಯ ಕೈಗೊಳ್ಳಬೇಕು. ಈ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಪೌರಕಾರ್ಮಿಕರಿಗೆ ಸನ್ಮಾನ: ಪಟ್ಟಣದ ಸ್ವಚ್ಛತೆಯಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿರುವ ರವಿ ಮಾದರ, ಶಿವು ಕಟ್ಟಿಮನಿ, ಶೇಖಪ್ಪ ಮಾದರ, ನಿಂಬಣ್ಣ ಮಾದರ, ನಾಗಪ್ಪ ಮಾದರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಸೇರಿದಂತೆ ಹಲವು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಿಗೇರಿ ಸೇರಿದಂತೆ ಎಲ್ಲ ಸದಸ್ಯರು, ಪುರಸಭೆ ಸಿಬ್ಬಂದಿ, ಮುಖಂಡರು ಇದ್ದರು.