ರಾಜ್ಯ ಸರ್ಕಾರದ ಖಜಾನೆ ಖಾಲಿ

| Published : Jun 22 2024, 12:53 AM IST

ಸಾರಾಂಶ

ಕನಕಪುರ: ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಏಕಾಏಕಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿ ಬಡವರ ಮೇಲೆ ಗದಾಪ್ರಹಾರ ಮಾಡಲಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಆರೋಪಿಸಿದರು.

ಕನಕಪುರ: ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಏಕಾಏಕಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿ ಬಡವರ ಮೇಲೆ ಗದಾಪ್ರಹಾರ ಮಾಡಲಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಆರೋಪಿಸಿದರು.

ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವುದೂ ಅಲ್ಲದೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ರೈತರಿಗೆ ಹೈನು ಪ್ರೋತ್ಸಾಹ ಧನ ನೀಡಿಲ್ಲ, ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಲ್ಲದೆ ದಲಿತ ಜನಾಂಗ ಕಲ್ಯಾಣಕ್ಕಾಗಿ ಮೀಸಲಿಟ್ಟದ್ದ ಹಣವನ್ನೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತೇವೆಂದು ಹೇಳಿ ಬಸ್‌ ಪ್ರಯಾಣ ದರ ಹೆಚ್ಚಿಸಲು ಮುಂದಾಗಿರುವುದು ನಾಚಿಕೆಗೇಡಿನ ವಿಷಯ ಎಂದರು.

ಇದೇ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಸರ್ಕಾರದಲ್ಲಿ ಪೆಟ್ರೋಲ್‌ಗೆ 1 ರು. ಹೆಚ್ಚಳ ಮಾಡಿದ್ದಕ್ಕೆ ಬೆಲೆ ಹೆಚ್ಚಳದ ವಿರುದ್ಧ ಬೊಬ್ಬೆ ಹೊಡೆದಿದ್ದ ಇವರು ಇಂದು ಅವರ ಸರ್ಕಾರದಲ್ಲಿ ಮೂರರಷ್ಟು ದರ ಹೆಚ್ಚಿಸಿರುವ ಜನವಿರೋಧಿ ನೀತಿ ಖಂಡಿಸಬೇಕು ಎಂದರು.

ಬಿಜೆಪಿ ಸರ್ಕಾರದಲ್ಲಿ ರೈತರ ಕೃಷಿ ಚಟುವಟಿಕೆ, ಸಮರ್ಪಕ ವಿದ್ಯುತ್ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಸಕಾಲಕ್ಕೆ ನೀಡಲಾಗುತ್ತಿತ್ತು. ಕಾಂಗ್ರೆಸ್ ಆಳ್ವಿಕೆಯಲ್ಲಿ ರೈತರ ಪಂಪ್‌ಸೆಟ್‌ ಗಳಿಗೆ ಟಿಸಿ ಅಳವಡಿಸಲು ಹಣ ಕಟ್ಟಬೇಕು. ಹಣ ಕಟ್ಟಿದರೂ ರೈತರನ್ನು ಅಲೆದಾಡಿಸುತ್ತಿದ್ದಾರೆ. ದಲಿತರಿಗೆ ಭೂ ಮಂಜೂರಾತಿಯಿಲ್ಲ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸವಲತ್ತುಗಳು ಸಿಗುತ್ತಿಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಅವ್ಯವಹಾರ ನಡೆದಿದೆ. ಇದಕ್ಕೆ ಸಚಿವರೊಬ್ಬರೇ ಕಾರಣರಲ್ಲ, ಇನ್ನೂ ಹಲವು ಪ್ರಮುಖರಿದ್ದಾರೆ ಎಂದರು.

ರಾಜ್ಯ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ಬಾಬು, ಶ್ರೀರಾಮಸೇನೆ ಅಧ್ಯಕ್ಷ ನಾಗಾರ್ಜುನ, ಬಿಜೆಪಿ ಎಸ್.ಸಿ.ಮೋರ್ಚ ಅಧ್ಯಕ್ಷ ಹಾರೋಹಳ್ಳಿಚಂದ್ರು,ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರ. ಕಾರ್ಯದರ್ಶಿ ನಾಗಾನಂದ, ಶಿವಮುತ್ತು,ಸುನೀಲ್,ಭಗತ್ ರಾಮು, ಶೇಖರ್ ಹಾಜರಿದ್ದರು.

ಕೆಕೆಪಿ ಸುದ್ದಿ02 : ಕನಕಪುರ ತಾಲೂಕು ಕಬ್ಬಾಳು ಗ್ರಾಮದಲ್ಲಿ ಮಾಜಿ ಸಚಿವ ಎನ್.ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು.