ಹೆಣ್ಣು ಭ್ರೂಣಹತ್ಯೆ ಕಂಡರೂ ಕಣ್ಮುಚ್ಚಿ ಕುಳಿತ ರಾಜ್ಯ ಸರ್ಕಾರ: ಹೇಮಲತಾ ನಾಯಕ

| Published : Jun 03 2024, 12:31 AM IST

ಹೆಣ್ಣು ಭ್ರೂಣಹತ್ಯೆ ಕಂಡರೂ ಕಣ್ಮುಚ್ಚಿ ಕುಳಿತ ರಾಜ್ಯ ಸರ್ಕಾರ: ಹೇಮಲತಾ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆಯ ಕುರಿತು ಮಾಧ್ಯಮಗಳಲ್ಲಿಯೇ ವರದಿಯಾಗುತ್ತಿದೆ.

ಎಂಎಲ್‌ಸಿ ಹೇಮಲತಾ ನಾಯಕ ಆರೋಪ । ಕ್ರಮಕ್ಕೆ ಒತ್ತಾಯಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆಯ ಕುರಿತು ಮಾಧ್ಯಮಗಳಲ್ಲಿಯೇ ವರದಿಯಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಎನ್ನುವ ವಿಚಾರ ತಿಳಿಯುತ್ತಿಲ್ಲ ಎಂದು ಎಂಎಲ್‌ಸಿ ಹೇಮಲತಾ ನಾಯಕ್ ಸರ್ಕಾರದ ವಿರುದ್ಧ ಗುಡುಗಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದ ಆಲೆಮನೆಯಲ್ಲಿ ಭ್ರೂಣಹತ್ಯೆ ನಡೆದಿವೆ. ನೆಲಮಂಗಲದಲ್ಲಿ ನರ್ಸಿಂಗ್ ಹೋಮ್‌ನಲ್ಲಿ ಭ್ರೂಣಹತ್ಯೆ ನಡೆದಿವೆ. ಒಂದೊಂದು ಗರ್ಭಪಾತಕ್ಕೆ ದರ ನಿಗದಿ ಮಾಡಲಾಗಿದೆ. ಇದೆಲ್ಲವೂ ಸರ್ಕಾರದ ಗಮನಕ್ಕೆ ಇಲ್ಲವಾ? ಎಂದರಲ್ಲದೇ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ಪ್ರಸ್ತುತ ಕಾಲೇಜುಗಳಲ್ಲಿ ಗಲಾಟೆ ನಡೆಯುತ್ತಿದ್ದು, ವಿದ್ಯಾರ್ಥಿನಿಯರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಆರೋಪಿಸಿದರು.

ಸರ್ಕಾರದಲ್ಲಿ ಇಷ್ಟೊಂದು ಭ್ರೂಣ ಹತ್ಯೆ ಏಕೆ ನಡೆಯುತ್ತಿವೆ ಎಂದು ಸ್ವತಃ ಎಂಎಲ್‌ಸಿ ಉಮಾಶ್ರೀ ಅವರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಭ್ರೂಣಹತ್ಯೆಯ ವಿಚಾರದಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ಕಾಪಾಡುವ ಕೆಲಸ ಮಾಡುತ್ತಿದೆ ಎಂದು ದೂರಿದರು. ಮುದ್ದೇಬಿಹಾಳದಲ್ಲಿ ಓರ್ವ ನರ್ಸ್ ಮನೆಯಲ್ಲೇ ಗರ್ಭಪಾತ ಮಾಡಿಸುತ್ತಿದ್ದಾಳೆ. ಇಂಥ ಪ್ರಕರಣದಲ್ಲಿ ಎಷ್ಟು ಶಿಕ್ಷೆ ಆಗಿವೆ? ನರ್ಸ್‌ಗಳು ಹೆಣ್ಣುಮಕ್ಕಳ ಜೀವದ ಜತೆ ಆಟವಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಸರ್ಕಾರದ ಸಚಿವರು ಜಾರಿಕೊಳ್ಳುವ ಉತ್ತರ ನೀಡುತ್ತಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹೧೮೭ ಕೋಟಿ ಹಗರಣ ನಡೆದಿದೆ. ಈ ಹಗರಣದಲ್ಲಿ ಯಾರೆಲ್ಲ ಇದ್ದಾರೆ ಎಂದು ಚಂದ್ರಶೇಖರ್ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಈ ಇಲಾಖೆ ಜವಾಬ್ದಾರಿ ಹೊತ್ತಿರುವ ಸಚಿವ ಬಿ. ನಾಗೇಂದ್ರ ಕೂಡಲೇ ರಾಜಿನಾಮೆ ನೀಡಲಿ. ಇಲ್ಲಿ ಬ್ಯಾಂಕ್ ಅಧಿಕಾರಿಗಳ ಮೇಲಷ್ಟೇ ಕ್ರಮ ಕೈಗೊಳ್ಳುವ ಕೆಲಸ ನಡೆದಿದೆ. ಬ್ಯಾಂಕ್‌ಗಳ ಮೇಲೆ ಕೇಸ್ ದಾಖಲಾಗಿರುವುದು ನಿಜಕ್ಕೂ ದುರಂತದ ಸಂಗತಿ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರ ಮೇಲೆ ಕ್ರಮವಾಗಲಿ ಎಂದು ಒತ್ತಾಯಿಸಿದರು.

ಬಿಜೆಪಿ ಪದಾಧಿಕಾರಿಗಳಾದ ಪ್ರಮೋದ, ಸೋಮಶೇಖರ ಗೌಡ, ರಾಜು ಬಾಕಳೆ ಉಪಸ್ಥಿತರಿದ್ದರು.