ನೂರು ವರ್ಷ ಪೂರೈಕೆ ಮಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪ್ರಾರಂಭದಲ್ಲಿ ಮಹಿಳಾ ಅಧ್ಯಕ್ಷೆಯಾಗಿದ್ದನ್ನು ಹೊರತುಪಡಿಸಿ ಇದುವರೆಗೂ ಮಹಿಳೆಯರಿಗೆ ಅವಕಾಶ ನೀಡಿಲ್ಲ
ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲವಾದ್ದರಿಂದ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಲಾಗಿದ್ದು, ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿಗೌಡ ಹೇಳಿದ್ದಾರೆ.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಬುಧುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಸಂಘಕ್ಕೂ ಮತ್ತು ಮಹಿಳಾ ನೌಕರರ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.ನೂರು ವರ್ಷ ಪೂರೈಕೆ ಮಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪ್ರಾರಂಭದಲ್ಲಿ ಮಹಿಳಾ ಅಧ್ಯಕ್ಷೆಯಾಗಿದ್ದನ್ನು ಹೊರತುಪಡಿಸಿ ಇದುವರೆಗೂ ಮಹಿಳೆಯರಿಗೆ ಅವಕಾಶ ನೀಡಿಲ್ಲ, ಜಿಲ್ಲಾ ಹಂತದಲ್ಲಿಯೂ ಅವಕಾಶ ಇರುವುದಿಲ್ಲ.ಹೀಗಾಗಿ, ಮಹಿಳೆಯರ ಸಮಸ್ಯೆಗಳಿಗೆ ಧ್ವನಿ ಎತ್ತಲು ಪ್ರತ್ಯೇಕ ಸಂಘಟನೆ ಹುಟ್ಟು ಹಾಕಿದ್ದು, ಅದನ್ನು ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ಈಗ ಪ್ರತಿ ಜಿಲ್ಲೆಯಲ್ಲಿಯೂ ವಿಸ್ತರಣೆ ಮಾಡಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿಯೂ ಮಹಿಳಾ ಸಂಘಟನೆಯ ಶಾಖೆ ಪ್ರಾರಂಭಿಸುವುದಕ್ಕಾಗಿ ಆಗಮಿಸಿದ್ದು, ಇಲ್ಲಿಯ ಮಹಿಳಾ ಸರ್ಕಾರಿ ನೌಕರರೊಂದಿಗೆ ಸಭೆ ನಡೆಸಿ, ಶೀಘ್ರದಲ್ಲಿಯೇ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಈಗಾಗಲೇ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ನೋಂದಣಿಯಾಗಿದ್ದು, ರಾಜ್ಯ ಸರ್ಕಾರವೂ ಸಹ ಇದಕ್ಕೆ ಸಮ್ಮತಿ ನೀಡಿದೆ. ಅಷ್ಟೇ ಅಲ್ಲ,ನಮ್ಮ ಮೊದಲ ಬೇಡಿಕೆಯಾಗಿರುವ ಋತುಚಕ್ರ ರಜೆ ರಾಜ್ಯ ಸರ್ಕಾರ ಈಡೇರಿಸಿ ಆದೇಶಿಸಿದೆ. ಆದರೆ, ಇದನ್ನು ಈಗ ರಾಜ್ಯ ಸರ್ಕಾರಿ ನೌಕರರ ಸಂಘ ನಾವು ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಾವು ಪ್ರಸ್ಥಾವನೆ ಮಂಡಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕು. ಒಮ್ಮೆ ಮಹಿಳೆಯರು ಆದರೆ,ಮತ್ತೊಮ್ಮೆ ಪುರುಷರು ಆಗುವಂತೆ ಆಗಬೇಕು. ಪುರಷರು ಅಧ್ಯಕ್ಷರಾದರೇ ಮಹಿಳೆಯರು ಪ್ರಧಾನಕಾರ್ಯದರ್ಶಿಗಳಾಗಲಿ, ಮಹಿಳೆಯರು ಅಧ್ಯಕ್ಷರಾದಾಗ ಪುರುಷರು ಪ್ರಧಾನ ಕಾರ್ಯದರ್ಶಿಯಾಗಲಿ. ಜಿಲ್ಲಾಮಟ್ಟದಲ್ಲಿಯೇ ಇದೇ ರೀತಿ ಆಗುವಂತೆ ಆಗಬೇಕು ಎನ್ನುವ ನಮ್ಮ ಬೇಡಿಕೆ ಈಡೇರಿಸಲಿಲ್ಲ.ಹೀಗಾಗಿ, ಈಗ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವನ್ನು ಪ್ರತ್ಯೇಕವಾಗಿಯೇ ಮಾಡಲಾಗಿದ್ದು, ಸ್ವತಂತ್ರವಾಗಿದೆ ಎಂದರು.
ಈಗಲೂ ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ ತಿದ್ದುಪಡಿ,ಮಹಿಳಾ ಮೀಸಲಾತಿ ಜಾರಿ ಮಾಡಿದ್ದೇ ಆದರೆ, ಪುನಃ ಸೇರ್ಪಡೆಯಾಗುವ ಚಿಂತನೆ ನಮ್ಮ ಸಂಘದಲ್ಲಿ ಚರ್ಚೆ ಮಾಡಲಾಗುವುದು ಎಂದರು.ಸೆ.13 ರಂದು ಮೇರಿ ದೇವಾಸಿಯಾ ಅವರ ಜನ್ಮದಿನವಾಗಿದ್ದು, ಅಂದೇ ಮಹಿಳಾ ಸರ್ಕಾರಿ ನೌಕರರ ದಿನಾಚರಣೆ ಆಚರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ರಾಜ್ಯ ಖಜಾಂಜಿ ಡಾ.ವೀಣಾ ಕೃಷ್ಣಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆಶಾರಾಣಿ ಇದ್ದರು.