ವಕ್ಫ್ ಆಸ್ತಿಗಾಗಿ ರಾಜ್ಯ ಸರ್ಕಾರದ ಕುಮ್ಮಕ್ಕು: ರೈತರ ಪ್ರತಿಭಟನೆ

| Published : Nov 06 2024, 12:46 AM IST

ಸಾರಾಂಶ

ತಾಲೂಕು ಕಚೇರಿಯಲ್ಲಿ ಪ್ರತಿ ವಿಭಾಗದಲ್ಲಿ ಅಧಿಕಾರಿಗಳು ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ. ಇದರಿಂದ ರೈತರ ಹಾಗೂ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ಕೂಡಲೇ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಲಂಚಗುಳಿತನ ನಿಲ್ಲಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮಕ್ಕಿನಿಂದ ವಕ್ಫ್ ಆಸ್ತಿಗಾಗಿ ರಾಜ್ಯದ ರೈತರು ಮತ್ತು ಹಿಂದುಗಳ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಕಾರ್ಯಕರ್ತರು ಮುಖಂಡರಾದ ಅಣ್ಣೂರು ಮಹೇಂದ್ರ, ಸೊ.ಶಿ.ಪ್ರಕಾಶ್ ಹಾಗೂ ಕೀಳಘಟ್ಟ ನಂಜುಂಡಯ್ಯ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ರೈತರ, ಹಿಂದುಗಳ ಹಾಗೂ ಮಠಗಳ ಜಮೀನುಗಳನ್ನು ಕಬಳಿಸುವ ಹುನ್ನಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ವಕ್ಫ್ ಕಮಿಟಿ ಜತೆಯಲ್ಲಿ ಸೇರಿಕೊಂಡು ಮುಸ್ಲಿಮರ ಓಲೈಕೆ ಮಾಡುವ ಉದ್ದೇಶದಿಂದ ರೈತರ ಜಮೀನನ್ನು ಕಬಳಿಸುತ್ತಿದೆ. ಆರ್ ಟಿಸಿಯಲ್ಲಿ ವಕ್ಫ್ ಸೇರಿದೆ ಎಂದು ಬರುತ್ತಿರುವ ಸರ್ಕಾರಿ ಜಮೀನು ಹಾಗೂ ರೈತರ ಜಮೀನುಗಳನ್ನು ಈ ಕೂಡಲೇ ರದ್ದುಗೊಳಿಸಬೇಕು. ಮತ್ತೆ ರೈತರು ಹಾಗೂ ಸರ್ಕಾರದ ಹೆಸರಿನಲ್ಲಿ ಆರ್ ಟಿಸಿಗಳು ಬರಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ಒಟ್ಟು 80,145 ಕಾರ್ಡುಗಳಲ್ಲಿ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ 74,177, ಅಂತ್ಯೋದಯ ಕಾರ್ಡ್ ಗಳ ಸಂಖ್ಯೆ 5968. ಇದರಲ್ಲಿ 971 ಬಿಪಿಎಲ್ ಕಾರ್ಡ್ ಹಾಗೂ 51 ಅಂತ್ಯೋದಯ ಕಾರ್ಡ್ ಗಳು ರದ್ದಾಗಿದೆ. ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಹಾರ ಶಾಖೆ ಎದುರು ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಕಚೇರಿಯಲ್ಲಿ ಪ್ರತಿ ವಿಭಾಗದಲ್ಲಿ ಅಧಿಕಾರಿಗಳು ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ. ಇದರಿಂದ ರೈತರ ಹಾಗೂ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ಕೂಡಲೇ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಲಂಚಗುಳಿತನ ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಡಾ.ಸ್ಮಿತಾರಾಮು ಆಗಮಿಸಿ ಮನವಿ ಪತ್ರ ಸ್ವೀಕರಿಸಿ ನಿಮ್ಮ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಬಗೆ ಹರಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಪ್ರಭುಲಿಂಗ, ಕುದರಗುಂಡಿ ನಾಗರಾಜು, ವೆಂಕಟೇಶ್, ರಾಮಣ್ಣ, ಮುದ್ದೇಗೌಡ, ರಮೇಶ್, ಮರಲಿಂಗ, ರಾಮಕೃಷ್ಣಯ್ಯ, ಪುಟ್ಟಸ್ವಾಮಿ ಇದ್ದರು.