ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನದ ಅನುಚ್ಛೇದ 341 (1) ರಂತೆ ಇದ್ದ ಸಾಂವಿಧಾನಿಕ ಹಕ್ಕನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿ ಕುಡುಬಿ ಸಮುದಾಯದವರು ಮಂಗಳೂರಲ್ಲಿ ಮಂಗಳವಾರ ಹಕ್ಕೊತ್ತಾಯ ಜಾಥಾ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನಗರದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಕುಡುಬಿ ಸಮುದಾಯದವರು ತಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.1936ರ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕುಡುಬಿ ಸಮುದಾಯದ ಹೆಸರು ಒಳಗೊಂಡಿತ್ತು. 1950ರಲ್ಲಿ ಕುಡುಬಿ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ ಸಾಂವಿಧಾನಿಕ ರಕ್ಷಣೆ ನೀಡಲಾಗಿತ್ತು. ಆದರೆ 1956ರ ಮಾರ್ಪಾಡು ಆದೇಶದಲ್ಲಿ ಕುಡುಬಿ ಜಾತಿಯ ಹೆಸರನ್ನು ಕುಡುಂಬನ್ ಎಂದು ತಪ್ಪಾಗಿ ಮುದ್ರಿಸಿ ನಮ್ಮ ಸಮುದಾಯವನ್ನು ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕೇಂದ್ರ ಸರ್ಕಾರ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು ಆಗ್ರಹಿಸಿದರು.ದ.ಕ. ಜಿಲ್ಲಾ ಕುಡುಬಿ ಪ್ರಧಾನ ಕಾರ್ಯದರ್ಶಿ ಶೇಖರ ಗೌಡ ಬಜ್ಪೆ , ಸಂಘಟನಾ ಕಾರ್ಯದರ್ಶಿ ಸುಂದರ ಗೌಡ ಕಡಂದಲೆ , ಜೊತೆ ಕಾರ್ಯದರ್ಶಿ ಸುರೇಶ್ ಕೊಂಪದವು, ಉಪಾಧ್ಯಕ್ಷ ಕೊರ್ಗ್ಯ ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಹೇಮಚಂದ್ರ, ಕೋಶಾಧಿಕಾರಿ ರಾಮ ಗೌಡ, ವಿದ್ಯಾವೇದಿಕೆ ಸಂಚಾಲಕ ಉದಯ ಮಂಗಳೂರು, ರಾಜ್ಯ ಕಾರ್ಯದರ್ಶಿ ನಾರಾಯಣ ನಾಯ್ಕ್ಕ ಗೋಳಿಯಂಗಡಿ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ ಮತ್ತಿತರರಿದ್ದರು.
ಕುಡುಬಿ ಸಮುದಾಯದ ಜಾನಪದ ಕಲೆಯಾದ ಗುಮ್ಮಟೆ, ಕೋಲಾಟ ತಂಡ ಈ ಜಾಥಾದಲ್ಲಿ ಭಾಗವಹಿಸಿತ್ತು. ಜಾಥಾಬಳಿಕ ಸಮುದಾಯದ ಧುರೀಣರು ದ.ಕ. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.