ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಆರೋಪ

| Published : Feb 05 2025, 12:32 AM IST

ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರು ಹತೋಟಿ ತಪ್ಪಿದ್ದಾರೆ. ಅವರು ಕೇವಲ ಹಣ ನೀಡುವವರು ಮತ್ತು ಪ್ರಭಾವಶಾಲಿಗಳ ಪರಪವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇರಬೇಕಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ. ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಹತೋಟಿಗೆ ತೆಗೆದುಕೊಳ್ಳಬೇಕಾದರೆ ಅಧಿಕಾರಿಗಳು ಮತ್ತು ಪೊಲೀಸರನ್ನು ಹತೋಟಿಗೆ ತೆಗೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಯಾವುದೇ ಕ್ರಮ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಎಂ.ರಮೇಶ್‌ಗೌಡ ಆರೋಪಿಸಿದರು.

ಪೊಲೀಸರು ಹತೋಟಿ ತಪ್ಪಿದ್ದಾರೆ. ಅವರು ಕೇವಲ ಹಣ ನೀಡುವವರು ಮತ್ತು ಪ್ರಭಾವಶಾಲಿಗಳ ಪರಪವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇರಬೇಕಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ. ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಹತೋಟಿಗೆ ತೆಗೆದುಕೊಳ್ಳಬೇಕಾದರೆ ಅಧಿಕಾರಿಗಳು ಮತ್ತು ಪೊಲೀಸರನ್ನು ಹತೋಟಿಗೆ ತೆಗೆದುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದ ಲಕ್ಷಾಂತರ ಮಂದಿ ಸಂಸ್ಥೆಯವರ ಕಿರುಕುಳ ತಾಳಲಾರದೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರೂ ಇದುವರೆಗೂ ಒಬ್ಬರ ಬಂಧನವಾಗಿಲ್ಲ. ಮನೆ ಜಪ್ತಿ, ಸಾಲ ತೀರಿಸದವರ ಆಸ್ತಿ ಮುಟ್ಟು ಗೋಲು, ಕಿರುಕುಳ, ಹಿಂಸೆ ಇಂದಿಗೂ ಮುಂದುವರೆದಿದೆ. ಪರಿಸ್ಥಿತಿ ಹೀಗಿದ್ದರೂ ಸಕಾಆರ ಮಾತ್ರ ಗಾಢನಿದ್ರೆಯಲ್ಲಿದೆ ಎಂದು ದೂರಿದರು.

ರಾಜ್ಯದಲ್ಲಿ ವಂಚಕ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆನ್‌ಲೈನ್ ರಮ್ಮಿ, ಬೆಟ್ಟಿಂಗ್, ಆನ್‌ಲೈನ್ ಸಾಲದ ಆಪ್‌ಗಳಿಗೆ ಸರ್ಕಾರಗಳು ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಹಣ ಕಳೆದುಕೊಂಡು ಸಂಸಾರಗಳು ಬೀದಿಗೆ ಬೀಳುತ್ತಿವೆ. ಆರೋಗ್ಯ, ಶಿಕ್ಷಣ, ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸದೆ, ಭ್ರಷ್ಟಾಚಾರ, ದುರಾಡಳಿತವನ್ನು ಹೋಗಲಾಡಿಸದೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿಯನ್ನು ಸುಗ್ರೀವಾಜ್ಞೆ ಜಾರಿಯೊಂದಿಗೆ ತಪ್ಪಿಸುವುದಾಗಿ ತಿಪ್ಪೇ ಸಾರಿಸುವ ಕೆಲಸವಾಗಿದೆ. ಮೂಲ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸರ್ಕಾರದ ಯಾವ ಭಾಗ್ಯ ಮತ್ತು ಗ್ಯಾರಂಟಿಯೂ ಜನರಿಗೆ ನೆಮ್ಮದಿ ನೀಡುವುದಿಲ್ಲ ಎಂದರು.

ಸಾಲ ಪಡೆದವರಿಗೆ ಸಂಸ್ಥೆಗಳಿಂದ ಕಿರುಕುಳ ಮುಂದುವರೆದರೆ ರಾಷ್ಟ್ರಪಕ್ಷದ ಕಾರ್ಯಕರ್ತರಿಗೆ ತಿಳಿಸಿದರೆ ನಾವು ನಿಮ್ಮ ರಕ್ಷಣೆಗೆ ನಿಲ್ಲುತ್ತೇವೆ. ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಂದ್ರು, ವೈ.ಕೆ.ಶಶಿಧರ, ಮಲ್ಲೇಶ. ಡಿ.ಜಿ..ನಾಗರಾಜು, ಮಂಜುನಾಥ. ಸಿ.ಕೆ.ಜಯರಾಂ ಇದ್ದರು.