ಸಾರಾಂಶ
ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗಿನ ಲೋಕೋಪಯೋಗಿ ಇಲಾಖೆಯ ಅಧೀನಕ್ಕೊಳಪಟ್ಟ ಪ್ರಮುಖ ರಸ್ತೆಗಳು, ಸೇತುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಸುಮಾರು 13 ಕೋಟಿ ರುಪಾಯಿಗಳಷ್ಟು ಮೊತ್ತದ ಅನುದಾನವನ್ನು ಮಂಜೂರು ಮಾಡಿದೆ.
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗಿನ ಲೋಕೋಪಯೋಗಿ ಇಲಾಖೆಯ ಅಧೀನಕ್ಕೊಳಪಟ್ಟ ಪ್ರಮುಖ ರಸ್ತೆಗಳು, ಸೇತುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಸುಮಾರು 13 ಕೋಟಿ ರುಪಾಯಿಗಳಷ್ಟು ಮೊತ್ತದ ಅನುದಾನವನ್ನು ಮಂಜೂರು ಮಾಡಿರುವುದು ಸಂತಸದ ವಿಚಾರ. ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯ ಎಂದು ಹೇಳಿಕೆ ನೀಡುತ್ತಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್‌ಗೆ, ರಾಜ್ಯ ಸರ್ಕಾರದ ಅನುದಾನ ಬಿಡುಗಡೆಯು ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಇತರ ರಾಜ್ಯಗಳಲ್ಲಿ ಬಿಜೆಪಿ ತನ್ನ ಪ್ರಮುಖ ಚುನಾವಣಾ ಪ್ರಣಾಳಿಕೆ ಅಂಶವಾಗಿ ಘೋಷಿಸಿಕೊಂಡಿವೆ. ಇದು ಗ್ಯಾರಂಟಿ ಯೋಜನೆಗಳು ಎಷ್ಟು ಪ್ರಭಾವಿಯಾಗಿವೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿದೆ. ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯ ಎನ್ನುತ್ತಾ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಅಪಹಾಸ್ಯ ಮಾಡುತ್ತಾ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಹೇಳನ ಮಾಡುತ್ತಿದ್ದ ಶಾಸಕ ಸುನೀಲ್ ಕುಮಾರ್ ಇನ್ನಾದರೂ ಕಣ್ಣು ತೆರೆದು ನೋಡಲಿ ಎಂದು ಶುಭದರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.