ಮಡಿಕೇರಿ-ದೋಣಿಗಲ್ಲು ಮಾರ್ಗದ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದು ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.
ಮಡಿಕೇರಿ : ಮಡಿಕೇರಿ-ದೋಣಿಗಲ್ಲು ಮಾರ್ಗದ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದು ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಕರ್ಣಂಗೇರಿ ಗ್ರಾಮದ ಚಂದ್ರಗಿರಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಮಡಿಕೇರಿ, ಮಾದಾಪುರ, ಸೋಮವಾರಪೇಟೆ, ಶನಿವಾರಸಂತೆ, ದೋಣಿಗಲ್ಲು ಮಾರ್ಗದ ಸುಮಾರು 96 ಕಿ.ಮೀ ರಸ್ತೆ ನಿರ್ಮಾಣ ಆಗಲಿದ್ದು, 15 ಗ್ರಾ.ಪಂ.ಗಳು ಈ ಹೆದ್ದಾರಿ ವ್ಯಾಪ್ತಿಯಲ್ಲಿ ಬರಲಿದ್ದು, 60 ಅಡಿಯಷ್ಟು ರಸ್ತೆ ಅಗಲೀಕರಣ ಆಗಲಿದೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು. ಈ ಯೋಜನೆಗೆ ಸುಮಾರು 1300 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಆಗಲಿದೆ. ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಇದೊಂದು ದೊಡ್ಡ ಯೋಜನೆ ಎಂದು ಶಾಸಕರು ನುಡಿದರು.ಪ್ರಸ್ತುತ ಸರ್ಕಾರ ಜಾರಿಗೊಳಿಸಿರುವ ಪ್ರಜಾಸೇವಾ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆ ದಿಸೆಯಲ್ಲಿ ಪ್ರತಿ ಶನಿವಾರ ಎರಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ರಜಾಸೇವಾ ಅಭಿಯಾನ ಆಯೋಜಿಸಲು ಚಿಂತಿಸಲಾಗಿದೆ, ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಶಾಸಕರು ಸಲಹೆ ಮಾಡಿದರು.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿ ತಿಳಿದು ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕಿದೆ. ಆ ನಿಟ್ಟಿನಲ್ಲಿ ರಜೆ ದಿನದಲ್ಲಿಯೂ ಕುಟುಂಬದ ಜತೆಗೆ ಸಾರ್ವಜನಿಕ ಕೆಲಸ ನಿರ್ವಹಿಸುವುದು ಅತ್ಯಗತ್ಯ ಎಂದು ಡಾ.ಮಂತರ್ ಗೌಡ ಅವರು ಕಿವಿಮಾತು ಹೇಳಿದರು.
ಗ್ರಾಮೀಣ ಭಾಗದ ಜನರ ಸಮಸ್ಯೆ, ಅಹವಾಲು ಆಲಿಸುವಲ್ಲಿ ಪ್ರಜಾಸೇವಾ ಅಭಿಯಾನ ಸಹಕಾರಿ ಆಗಿದ್ದು, ಸಾರ್ವಜನಿಕರಿಗೆ ಸ್ಪಂದಿಸುವುದು ಅತ್ಯಗತ್ಯ ಎಂದರು.ಈ ಬಾರಿ ಮಳೆ ಕಡಿಮೆಯಾಗಿ, ಬರ ಘೋಷಣೆ ಆಗಿದೆ, ಆ ದಿಸೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಕೆ, ಜತೆಗೆ ಸಾರ್ವಜನಿಕರಿಗೆ ಪ್ರತಿನಿತ್ಯ ಹಲವು ಕೆಲಸಗಳು ಆಗಬೇಕಿದೆ ಎಂದು ಶಾಸಕರು ತಾಕೀತು ಮಾಡಿದರು. ಜನರಿಗೆ ಸುಳ್ಳು ಆಶ್ವಾಸನೆ ನೀಡದೆ, ವಿವಿಧ ಬೇಡಿಕೆಗಳನ್ನು ಕಾನೂನು ಬದ್ಧವಾಗಿ ಒದಗಿಸುವುದು ಅತ್ಯವಶ್ಯಕ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಪ್ರತಿಪಾದಿಸಿದರು.ಕರ್ಣಂಗೇರಿಯಲ್ಲಿ ನಡೆದ ಪ್ರಜಾಸೇವಾ ಅಭಿಯಾನದಲ್ಲಿ ಸುಮಾರು 120 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು, ಕಂದಾಯ, ಆಹಾರ, ಲೋಕೋಪಯೋಗಿ, ಪಂಚಾಯತ್ ರಾಜ್, ವಿದ್ಯುತ್ ಹೀಗೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆ ಆದವು, ಹಲವು ಅರ್ಜಿಗಳ ಮನವಿಯನ್ನು ಸ್ಥಳದಲ್ಲಿಯೇ ಶಾಸಕರು ಪರಿಹರಿಸಿದರು. ಬಳಿಕ ಹಲವು ಕುಟುಂಬಕ್ಕೆ ಜಾಗದ ಹಕ್ಕುಪತ್ರ ವಿತರಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಪ್ರಮುಖರಾದ ಜಾನ್ಸನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್, ತಹಸೀಲ್ದಾರರಾದ ಶ್ರೀಧರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.