ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜೈಲಿನ ಬೇಕರಿ ವಿಭಾಗದಲ್ಲಿ ಕೇಕ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಯಾರಾಗಬೇಕು. ಅಗತ್ಯವಿರುವಷ್ಟು ಮಾತ್ರ ಎಸೆನ್ಸ್ ನೀಡಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಂ ಭಟ್ಹೇಳಿದರು.ನಗರದ ಕೇಂದ್ರ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕಾರಾಗೃಹದಲ್ಲಿ ಬೇಕರಿ, ನೇಯ್ಗೆ, ಮರಗೆಲಸ ಮುಂತಾದ ವಿಭಾಗಗಳನ್ನು ತೆರೆಯಲಾಗಿದೆ. ಇನ್ನು ಮುಂದೆ ಎಲ್ಲಾ ವಿಭಾಗಗಳಿಗೂ ಸಿಸಿಟಿವಿ ಅಳವಡಿಸಬೇಕು. ಕೇಕ್ ತಯಾರಿಕೆ ನಡೆಯುವ ವೇಳೆ ಇನ್ಸ್ಪೆಕ್ಟರ್ಒಬ್ಬರು ಹಾಜರಿದ್ದು, ಅಗತ್ಯವಿದ್ದಷ್ಟು ಎಸೆನ್ಸ್ ಮಾತ್ರ ನೀಡಬೇಕು ಎಂದು ತಾಕೀತು ಮಾಡಿದರು.
ಕೇಕ್ ತಯಾರಿಕೆಗೆ ಬಳಸುವ ಎಸೆನ್ಸ್ ಸೇವಿಸಿ ಮೂವರು ಕೈದಿಗಳು ಸಾವಿಗೀಡಾಗಿದ್ದಾರೆ ಎಂದು ನಂಬಲಾಗಿದೆ. ಮುಂದಿನ ಎರಡು ವಾರದಲ್ಲಿ ಎಫ್.ಎಸ್.ಎಲ್ ವರದಿ ಬರಲಿದ್ದು, ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ಡಿ. 24ರಂದು ಅಲ್ಲಿ 15 ಕೆಜಿ ಕೇಕ್ ತಯಾರಿಸಲಾಗಿದೆ. ಇದಕ್ಕಾಗಿ 60 ಎಂಎಲ್ ರಮ್ ಎಕ್ಸಲೆಂಟ್ ಎಂಬ ಎಸೆನ್ಸ್ ನೀಡಲಾಗಿದೆ. ಅದರಲ್ಲಿ ಅವರು ಕೇಕ್ ತಯಾರಿಕೆಗೆ ಬಳಸಿದ್ದಾರಾ? ಅಥವಾ ಅಷ್ಟನ್ನೂ ಮೂವರು ಸೇವಿಸಿದರಾ ಎಂಬದು ಗೊತ್ತಿಲ್ಲ ಎಂದರು.ಎಸೆನ್ಸ್ ಸೇವಿಸಿದಲ್ಲಿ ನಶೆ ಬರಬಹುದು ಎಂಬ ಭಾವನೆ ಅವರಲ್ಲಿತ್ತು ಎನ್ನಲಾಗಿದೆ. ನಾಲ್ವರಲ್ಲಿ ಪ್ರಸನ್ನ ಎಂಬವರು ಅದನ್ನು ಸೇವಿಸಿಲ್ಲ. ಉಳಿದವರು ಸೇವಿಸಿ ಹೊಟ್ಟೆ ನೋವು ಎಂದು ಹೇಳಿದ್ದಾರೆ. ನಿಜವಾದ ಕಾರಣ ಯಾರೂ ತಿಳಿಸಿರಲಿಲ್ಲ ಎಂದರು.
ಜ. 2ರಂದು ಓರ್ವ ಕೈದಿ ಸತ್ಯ ಹೇಳಿದ್ದಾನೆ. ನಂತರ ವೈದ್ಯರು ಚಿಕಿತ್ಸೆ ಸ್ವರೂಪ ಬದಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗಿದೆ. ಅತ್ಮಹತ್ಯೆ ಅಥವಾ ಇನ್ನಾವುದೇ ಉದ್ದೇಶ ಅವರಲ್ಲಿ ಇರಲಿಲ್ಲ ಎಂದು ಸಹ ಕೈದಿಗಳು ತಿಳಿಸಿದ್ದಾರೆ ಎಂದರು.ಜೈಲಿನ ಕೆಲ ನಿವಾಸಿಗಳು ನಿದ್ರೆ ಬರುತ್ತಿಲ್ಲ ಎಂದು ದೂರಿದ್ದಾರೆ. ಹೀಗಾಗಿ ಅವರಿಗೆ ವೈದ್ಯರ ಸಲಹೆ ಪಡೆದು ನಿದ್ರೆ ಮಾತ್ರ ನೀಡಬೇಕು ಎಂದು ಹೇಳಿದ್ದೇವೆ. ದಿನಕ್ಕೆ ಒಂದು ಮಾತ್ರೆಯನ್ನಷ್ಟೇ ನೀಡಬೇಕು ಎಂದು ಸೂಚಿಸಿರುವುದಾಗಿ ಅವರು ತಿಳಿಸಿದರು.
ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಅವರೊಡನೆ ಶ್ಯಾಂ ಭಟ್ಅವರು ಕಾರಾಗೃಹಕ್ಕೆ ಭೇಟಿ ನೀಡಿ, ಜೈಲು ಅಧೀಕ್ಷಕ ರಮೆಶ್ ಅವರಿಂದ ಕೈದಿಗಳ ಸಾವು ಕುರಿತು ಮಾಹಿತಿ ಪಡೆದರು. ನಂತರ ಬೇಕರಿ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕೈದಿ ಪ್ರಸನ್ನ ಜತೆ ಮಾತುಕತೆ ನಡೆಸಿದ ಅವರು, ಮೃತರೊಂದಿಗಿನ ಒಡನಾಟದ ಬಗ್ಗೆ ತಿಳಿದುಕೊಂಡರು.ಬಳಿಕ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಮೂವರ ಸಾವಿಗೆ ಸಂಬಂಧಿಸಿದಂತೆ ಡೀನ್ದಾಕ್ಷಾಯಿಣಿ ಹಾಗೂ ಪ್ರಭಾರ ಅಧೀಕ್ಷ ಡಾ. ದಿನೇಶ್ಅವರಿಂದ ಮಾಹಿತಿ ಪಡೆದರು.
ನಾಗೇಶ್ ಹೃದಯಾಘಾತದಿಂದ ಸಾವುಇತ್ತೀಚೆಗೆ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಮೃತಪಟ್ಟ ಚೌಡಹಳ್ಳಿ ಗ್ರಾಮದ ನಾಗೇಶ್ಸಾವು ಹೃದಯಾಘಾತದಿಂದ ಸಂಭವಿಸಿರುವುದಾಗಿ ವರದಿ ಬಂದಿದೆ ಎಂದು ಡೀನ್ದಾಕ್ಷಾಯಿಣಿ ಆಯೋಗಕ್ಕೆ ತಿಳಿಸಿದರು.