ರಾಜ್ಯಕ್ಕೆ ನ್ಯಾಯಸಮ್ಮತ ಅನುದಾನ ಸಿಗುತ್ತಿಲ್ಲ: ಶಾಸಕ ಮಾನೆ

| Published : Sep 07 2024, 01:41 AM IST

ಸಾರಾಂಶ

ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ 4 ಲಕ್ಷ ಕೋಟಿ ಆದಾಯ ಹೋಗುತ್ತಿದ್ದರೂ ರಾಜ್ಯಕ್ಕೆ ನ್ಯಾಯಸಮ್ಮತ ಅನುದಾನ ಸಿಗುತ್ತಿಲ್ಲ. 16ನೇ ಹಣಕಾಸು ಆಯೋಗದ ಕಾರ್ಯಕ್ರಮದಲ್ಲಾದರೂ ನ್ಯಾಯ ಸಿಕ್ಕರೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ 4 ಲಕ್ಷ ಕೋಟಿ ಆದಾಯ ಹೋಗುತ್ತಿದ್ದರೂ ರಾಜ್ಯಕ್ಕೆ ನ್ಯಾಯಸಮ್ಮತ ಅನುದಾನ ಸಿಗುತ್ತಿಲ್ಲ. 16ನೇ ಹಣಕಾಸು ಆಯೋಗದ ಕಾರ್ಯಕ್ರಮದಲ್ಲಾದರೂ ನ್ಯಾಯ ಸಿಕ್ಕರೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ದಶರಥಕೊಪ್ಪ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಅಸಹಕಾರದಿಂದ ಆರ್ಥಿಕ ಸಂಕಷ್ಟ ಇದೆ. ಆರ್ಥಿಕ ಸಂಕಷ್ಟದ ಮಧ್ಯೆಯೂ ರಾಜ್ಯ ಸರ್ಕಾರ ಜನತೆಗೆ ಆರ್ಥಿಕ ಶಕ್ತಿ ತುಂಬುವುದನ್ನು ಮರೆತಿಲ್ಲ. ದೊಡ್ಡ ಪ್ರಮಾಣದ ಆರ್ಥಿಕ ನೆರವನ್ನು ಜನತೆಯ ಖಾತೆಗೆ ನೇರವಾಗಿ ನೀಡುತ್ತಿರುವ ಯಾವುದಾದರೂ ಸರ್ಕಾರ ದೇಶದಲ್ಲಿ ಇದ್ದರೆ ಅದು ಕರ್ನಾಟಕದ ಸರ್ಕಾರ. ಹೊಸ ಸರ್ಕಾರ ಬಂದು 15 ತಿಂಗಳು ಕಳೆದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನುಡಿದಂತೆ ನಡೆದಿದ್ದಾರೆ. ಪ್ರತಿ ಕುಟುಂಬಗಳನ್ನೂ ಆರ್ಥಿಕವಾಗಿ ಸಶಕ್ತಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ 2022-23 ಮತ್ತು 2023-24ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಲೆಕ್ಕ ಶೀರ್ಷಿಕೆಯಡಿ 35 ಲಕ್ಷ ರು. ವೆಚ್ಚದಲ್ಲಿ ಗ್ರಾಮದ ವಡಗೇರಿ ಓಣಿಯಲ್ಲಿ ಸಿಸಿ ರಸ್ತೆ ಮತ್ತು ಗಟಾರ ನಿರ್ಮಾಣ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 3 ಲಕ್ಷ ರು. ವೆಚ್ಚದಲ್ಲಿ ಆಂಜನೇಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ 5 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣ ಗೋಡೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾಳಾಪೂರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಹನುಮಂತಪ್ಪ ಮರಗಡಿ, ಕಮಲವ್ವ ಹುಲ್ಲತ್ತಿ, ಮಕ್ಬೂಲ್ ಬಡಗಿ, ಅಶೋಕ ಜಾಧವ, ರಾಮಣ್ಣ ಓಲೇಕಾರ, ವಸಂತ ವೆಂಕಟಾಪುರ, ಹನುಮಂತ ಷಡಗರವಳ್ಳಿ ಈ ಸಂದರ್ಭದಲ್ಲಿದ್ದರು.