ಪ್ರೌಢಶಾಲೆಗೆ ರಾಜ್ಯಮಟ್ಟದ ಪ್ರಶಸ್ತಿ ತಾಲೂಕಿಗೆ ಸಂದ ಗೌರವ

| Published : Sep 06 2025, 02:00 AM IST

ಸಾರಾಂಶ

ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿಕೆ । ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ತಾಲೂಕಿಗೆ ಗೌರವ ತಂದಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಆಚರಣೆ ಸಮಿತಿ ಇವುಗಳ ಸಂಯುಕ್ತಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಭವ್ಯ ಭಾರತದ ಭವಿಷ್ಯದ ಪ್ರಜೆಗಳಾಗಿದ್ದು ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಭಾರತದ ಪರಂಪರೆ ಹಾಗೂ ಭವಿಷ್ಯವನ್ನು ರೂಪಿಸುವ ಮಕ್ಕಳನ್ನಾಗಿ ರೂಪಿಸಬೇಕು. ಮಕ್ಕಳೊಂದಿಗೆ ನಿಕಟ ಸಂಪರ್ಕ ಹೊಂದಿ ಉತ್ತಮ ಪಠ್ಯ ಚಟುವಟಿಕೆಗಳ ನಡೆಸುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮೋಹನ್ ಉಪನ್ಯಾಸ ನೀಡಿ ಮಾತನಾಡಿ, ತರಗತಿಗಳಲ್ಲಿ ಸಮಾಜ ಕಟ್ಟುವ ಕೆಲಸವನ್ನು ಶಿಕ್ಷಕರು ಮಾಡಿದಾಗ ಮಾತ್ರ ಉತ್ತಮ ದೇಶವನ್ನು ಕಟ್ಟಲು ಸಾಧ್ಯ. ನಾವು ಓದುವ ಪಠ್ಯಕ್ಕೂ ಬದುಕಿಕೂ ಸಂಬಂಧವಿಲ್ಲ ಇಂದಿನ ಯಾವುದೇ ಶಿಕ್ಷಣ ಬದುಕನ್ನು ಸರಿದಾರಿಗೆ ಕೊಂಡೊಯ್ಯುತ್ತಿಲ್ಲ ಪಠ್ಯ ಎನ್ನುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸರಕು ಅದಕ್ಕೆ ಜೀವ ತುಂಬುವ ಕೆಲಸವನ್ನು ಶಿಕ್ಷಕರ ಮಾಡಬೇಕು ಶಿಕ್ಷಣ ಎನ್ನುವದು ಮಕ್ಕಳಲ್ಲಿನ ಮೃಘಿಯಾ ಗುಣಗಳನ್ನು ಹೋಗಲಾಡಿಸಿ ಮನುಷ್ಯತ್ವವನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಆನಂದ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷ ಗೀತಾ ಗಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಸಯ್ಯದ್ ಮೋಸಿನ್, ತಾಪಂ ಸುನಿಲ್ ಕುಮಾರ್ ಕುಮಾರ್, ನೌಕರರ ಸಂಘದ ಅಧ್ಯಕ್ಷ ಶಾಂತಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ನಾಗಪ್ಪ, ಬಿಸಿಯೂಟ ನಿರ್ದೇಶಕ ಶಾಂತಪ್ಪ , ಕಸಾಪ ಅಧ್ಯಕ್ಷ ಶಾಂತಪ್ಪ ಮುಂತಾದವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನ ಸನ್ಮಾನಿಸಲಾಯಿತು. ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಉತ್ತಮ ಶಾಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ತಾಲೂಕು ಕಚೇರಿಯಿಂದ ಸಮುದಾಯ ಭವನದವರೆಗೆ ಜಾನಪದ ಕಲಾ ಮೇಳದೊಂದಿಗೆ ಕರೆತರಲಾಯಿತು.