ಸಾರಾಂಶ
ದಾವಣಗೆರೆ: ಮಾಜಿ ಸಂಸದ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಸ್ಮರಣಾರ್ಥ ಪ್ರಥಮ ಬಾರಿಗೆ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಜಿಎಂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ನಗರದ ಜಿಎಂ ವಿಶ್ವವಿದ್ಯಾಲಯದ ಮೈದಾನದಲ್ಲಿ ನ.29 ಮತ್ತು 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಶೋಧನಾ ವಿಭಾಗದ ಡೀನ್ ಡಾ.ಕೆ.ಎಸ್.ಭರತ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.29ರ ಬೆಳಿಗ್ಗೆ 10ಕ್ಕೆ ಜಿಎಂ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಪಂದ್ಯಾವಳಿಗೆ ಚಾಲನೆ ನೀಡುವರು. ಸಹ ಕುಲಪತಿ ಡಾ.ಎಚ್.ಡಿ.ಮಹೇಶಪ್ಪ, ಕುಲ ಸಚಿವ ಡಾ.ಬಿ.ಎಸ್.ಸುನಿಲಕುಮಾರ, ಸಂಶೋಧನಾ ವಿಭಾಗದ ಡೀನ್ ಡಾ.ಕೆ.ಎನ್.ಭರತ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಎಸ್.ಕಿರಣಕುಮಾರ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ.ಅಜ್ಜಯ್ಯ ಸೇರಿದಂತೆ ಪ್ರಾಚಾರ್ಯರು, ವಿವಿಧ ವಿಭಾಗದ ಮುಖ್ಯಸ್ಥರು, ನಿರ್ದೇಶಕರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.ದಾವಣಗೆರೆ, ಹಾಸನ, ಮೈಸೂರು, ಧಾರವಾಡ, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 30 ತಂಡ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳಿಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ. ಪುರುಷರ ವಿಭಾಗದ ವಿಜೇತ ತಂಡಕ್ಕೆ 20 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ, ಆಕರ್ಷಕ ಟ್ರೋಫಿ, ಮಹಿಳಾ ವಿಭಾಗದ ಮೊದಲ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರು., ಹಾಗೂ ದ್ವಿತೀಯ ಸ್ಥಾನಕ್ಕೆ 7500 ರು. ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ನ.30ರ ಸಂಜೆ 7ಕ್ಕೆ ಜರುಗಲಿರುವ ಸಮಾರೋಪದಲ್ಲಿ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ.ಲಿಂಗರಾಜು ವಿಜೇತ ತಂಡಗಳಿಗೆ ಬಹುಮಾನ ವಿತರಿಸುವರು. ಕುಲ ಸಚಿವ ಡಾ.ಬಿ.ಎಸ್.ಸುನಿಲಕುಮಾರ, ಸಂಶೋಧನಾ ವಿಭಾಗದ ಡೀನ್ ಡಾ.ಕೆ.ಎನ್.ಭರತ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಎಸ್.ಕಿರಣಕುಮಾರ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಜಿ.ಬಿ.ಅಜ್ಜಯ್ಯ ಸೇರಿದಂತೆ ಅನೇಕರು ಭಾಗವಹಿಸುವರು ಎಂದು ಹೇಳಿದರು. ಕಾಲೇಜಿನ ಡಾ.ಎಚ್.ಎಸ್.ಕಿರಣಕುಮಾರ್, ಜಿ.ಬಿ.ಅಜಯ್ಯ ಸುದ್ದಿಗೋಷ್ಠಿಯಲ್ಲಿದ್ದರು.