ಸಾರಾಂಶ
ಕಾರವಾರ: ವೃಕ್ಷ ಲಕ್ಷ ಆಂದೋಲನದ ಆಶ್ರಯದಲ್ಲಿ ಜೂ. 23ರಂದು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪರಿಸರ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿ ಕುರಿತು ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ. ಅದರಲ್ಲಿ ಕಡಲ ತೀರದ ಪರಿಸರ ಹಾಗೂ ಮೀನುಗಾರರ ಸಮಸ್ಯೆಯ ಬಗ್ಗೆಯೂ ಬೆಳಕು ಚೆಲ್ಲಲಾಗುವುದು ಎಂದು ವೃಕ್ಷ ಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ತಿಳಿಸಿದರು.ಸಮ್ಮೇಳನ ಕುರಿತು ನಗರದ ಹರಿಕಂತ್ರ ಮೀನುಗಾರರ ಸಹಕಾರ ಸಂಘದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಸರಾಸಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಮ್ಮೇಳನದಲ್ಲಿ ವೃಕ್ಷ ಲಕ್ಷ ಆಂದೋಲನ ನಡೆದು ಬಂದ ದಾರಿ, ಅಭಿನಂದನಾ ಗ್ರಂಥ ವೃಕ್ಷ ಮಿತ್ರ ಸಮರ್ಪಣೆ, ವೃಕ್ಷ ಲಕ್ಷ ಪ್ರಶಸ್ತಿ ಪ್ರದಾನ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ ಪ್ರಮುಖವಾಗಿ ರಾಜ್ಯಮಟ್ಟದ ಪರಿಸರ ಕಾರ್ಯಕರ್ತರ ಸಮಾವೇಶ ಹಾಗೂ ಚಿಂತನಗೋಷ್ಠಿ ನಡೆಯಲಿದೆ ಎಂದರು. ಹೊನ್ನಾವರದ ಶರಾವತಿ ನದಿಯಲ್ಲಿ ಪಂಪ್ಡ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಸರ್ಕಾರ ಮಾಡುತ್ತಿದೆ. ಅದರಿಂದ ತೊಂದರೆಗೊಳಗಾಗುವ ಹೊನ್ನಾವರದ ಶರಾವತಿ ನದಿ ತೀರದ ಜನರಿಗೆ ಸ್ವಲ್ಪವೂ ಅರಿವಿಲ್ಲ. ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಎರಡೂ ಒಟ್ಟಾಗಿ, ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು ಎಂಬುದು ನಮ್ಮ ಆಶಯ ಎಂದರು.
ಪರಿಸರ ವಿಜ್ಞಾನಿ ಡಾ. ವಿ.ಎನ್. ನಾಯಕ, ಪಶ್ಚಿಮ ಘಟ್ಟ ಹಾಗೂ ಕರಾವಳಿ ಒಂದಕ್ಕೊಂದು ಸಂಬಂಧವಿದೆ. ಪಶ್ಚಿಮ ಘಟ್ಟದಲ್ಲಿ ನಿರ್ಮಾಣ ಮಾಡುವ ಅಣೆಕಟ್ಟೆಗಳಿಂದ ಸಮುದ್ರದ ವಾತಾವರಣದ ಮೇಲೆ ಬದಲಾವಣೆಯಾಗುತ್ತದೆ. ಸಮುದ್ರ ಮೀನುಗಾರರ ಆಸ್ತಿ, ಅಲ್ಲಿ ಮೀನುಗಾರರಿಗೆ ಬದುಕುವ ಹಕ್ಕಿದೆ. ಆದರೆ, ಸರ್ಕಾರದ ಯೋಜನೆಗಳಿಂದ ಮೀನುಗಾರರ ಧ್ವನಿ ಅಡಗುತ್ತಿದೆ. ಈ ನಿಟ್ಟಿನಲ್ಲಿ ಮೀನುಗಾರರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದರು.ವಿಕಾಸ ತಾಂಡೇಲ, ಸಾಗರಮಾಲಾ ಯೋಜನೆಯಿಂದ ಇಡೀ ಕಡಲ ತೀರಕ್ಕೆ ಅಪಾಯವಿದೆ. ಮೀನುಗಾರರ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕಿದೆ ಎಂದರು.ಸಿಆರ್‌ಜಡ್ ಕಾಯ್ದೆ, ಪರಿಸರ ವಿಜ್ಞಾನಿಗಳಾದ ಪ್ರಕಾಶ ಮೇಸ್ತ, ಮಹಾಬಲೇಶ್ವರ ಹೆಗಡೆ, ರವೀಂದ್ರ ಶೆಟ್ಟಿ ಹಾಗೂ ಇತರರು ಇದ್ದರು.