ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಡಿಕೆಶಿ ಸೂಚನೆ

| Published : Jan 26 2024, 01:46 AM IST

ಸಾರಾಂಶ

ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶಕ್ಕೆ ಪೂರ್ವತಯಾರಿಯ ಕುರಿತು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ನಡೆಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕರಾವಳಿಯ ನಾಯಕರಿಗೆ ಸೂಚನೆ ನೀಡಿದ್ದಾರೆ.ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶಕ್ಕೆ ಪೂರ್ವತಯಾರಿಯ ಕುರಿತು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಮಂಡ್ಯ, ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ಕಾಂಗ್ರೆಸ್‌ ಗೆದ್ದಿರುವುದೇ ನಿದರ್ಶನ. ರಾಮನಗರದಲ್ಲಿ ಒಂದು ಸ್ಥಾನ ಹೊರತುಪಡಿಸಿ ಉಳಿದ ಸ್ಥಾನಗಳಲ್ಲಿ ಭರ್ಜರಿ ಜಯ ಗಳಿಸಿರುವುದು ನಮ್ಮ ಶಕ್ತಿಗೆ ಹಿಡಿದ ಕೈಗನ್ನಡಿ. ಈ ಶಕ್ತಿ ಎಲ್ಲೆಡೆ ಮುಂದುವರಿಯಬೇಕು. ಪಕ್ಷಕ್ಕಾಗಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುವವರನ್ನು ವಜಾ ಮಾಡುವ ಜತೆಗೆ ನಿಷ್ಠೆಯಿಂದ ಕಾರ್ಯ ನಿರ್ವಹಿಸುವವರಿಗೆ ಹೆಚ್ಚು ಅವಕಾಶ ನೀಡಬೇಕು ಎಂದು ಹೇಳಿದರು.ಬೆಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕ್ರಮ ನಡೆದಾಗ 3 ಲಕ್ಷ ಜನ ಕಾರ್ಯಕರ್ತರು ಸೇರುವುದು ಸುಲಭ. ಆದರೆ ಈ ಸಂಖ್ಯೆಯ ಕಾರ್ಯಕರ್ತರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆದಾಗ ಸೇರಬೇಕು. ಬೇಸರಗೊಂಡ ಅಥವಾ ಪಕ್ಷದಿಂದ ದೂರ ಉಳಿದ ಕಾರ್ಯಕರ್ತರನ್ನು ಮರಳಿ ಕರೆತರಬೇಕು ಎಂದು ಸೂಚಿಸಿದರು.ಫಲಿತಾಂಶ ಸಿಕ್ಕಿದರೆ ಬೇಡಿಕೆ ಈಡೇರಿಕೆ: ಸಂವಿಧಾನ ರಕ್ಷಣೆ ಮಾಡಿಕೊಂಡು, ಪಕ್ಷ ನಿಷ್ಠರಾಗಿ ಕಾರ್ಯ ನಿರ್ವಹಿಸಬೇಕು. ಪ್ರಸ್ತುತ ಕಾಂಗ್ರೆಸ್‌ ಪಕ್ಷದ ಸರ್ಕಾರ ಇರುವುದೇ ಕಾರ್ಯಕರ್ತರಿಗೆ ಆನೆಬಲ ಎಂದ ಡಿಕೆ ಶಿವಕುಮಾರ್‌, ಕಾರ್ಯಕರ್ತರು ವಿವಿಧ ಹುದ್ದೆ ಆಕಾಂಕ್ಷಿಗಳಾಗಿ ಬೇಡಿಕೆ ಸಲ್ಲಿಸಿದ್ದಾರೆ. ಫಲಿತಾಂಶ ಸಿಕ್ಕರೆ ಮಾತ್ರ ಎಲ್ಲ ಬೇಡಿಕೆ ಈಡೇರಿಸಬಹುದು ಎಂದರು.ಮುಂದೆ ಗ್ಯಾರಂಟಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದಲ್ಲಿ ಸಂಪುಟ ದರ್ಜೆಯ ಸಮಿತಿ ರೂಪಿಸಲಾಗುತ್ತದೆ. ಜತೆಗೆ ವಿವಿಧ ಹಂತದಲ್ಲಿ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಇದರಿಂದ 4 ಸಾವಿರ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲು ಸಾಧ್ಯವಾಗುತ್ತದೆ. ವಾರದೊಳಗೆ ಈ ಬಗ್ಗೆ ಆದೇಶ ಬಿಡುಗಡೆಯಾಗಲಿದೆ. ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಡಿಕೆ ಶಿವಕುಮಾರ್ ಹೇಳಿದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೇರಳ ಶಾಸಕ ರೋಜಿ ಜಾನ್, ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಇಬ್ರಾಹಿಂ, ಐವನ್ ಡಿಸೋಜ ಮತ್ತಿತರರಿದ್ದರು.