ಹಿರೇಕೆರೂರು ಪಟ್ಟಣದಲ್ಲಿ ನ. 15ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ ಆಯೋಜಿಸಲಾಗಿದೆ. ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಇದು ಹೊಸ ದಿಕ್ಸೂಚಿಯಾಗುವುದರ ಜತೆಗೆ ಉತ್ತರ ಕರ್ನಾಟಕದ ಸಹಕಾರಿ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವ ವೇದಿಕೆಯಾಗಲಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.

ಹಾವೇರಿ: ಹಿರೇಕೆರೂರು ಪಟ್ಟಣದಲ್ಲಿ ನ. 15ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ ಆಯೋಜಿಸಲಾಗಿದೆ. ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಇದು ಹೊಸ ದಿಕ್ಸೂಚಿಯಾಗುವುದರ ಜತೆಗೆ ಉತ್ತರ ಕರ್ನಾಟಕದ ಸಹಕಾರಿ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವ ವೇದಿಕೆಯಾಗಲಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.

ನಗರದ ಜಿಲ್ಲಾ ಸಹಕಾರಿ ಯೂನಿಯನ್ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಖಂಡ ಧಾರವಾಡ ಜಿಲ್ಲೆಯಲ್ಲಿ ಹಿರೇಕೆರೂರು ತಾಲೂಕು ಸಹಕಾರಿ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದೆ. ಸಹಕಾರಿ ಧುರೀಣ ಎಸ್.ಎಸ್. ಪಾಟೀಲ ಅವರು ಮಾದರಿ ಸಹಕಾರಿ ಸಂಸ್ಥೆ ಕಟ್ಟಿದ್ದಾರೆ. ಹಿರೇಕೆರೂರು ಟಿಎಪಿಎಂಎಸ್ ಸಂಸ್ಥೆಯೂ ಉತ್ತಮ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ರೈತರಿಗೆ 3,450ಕೋಟಿ ರು. ಸಾಲ ಕೊಟ್ಟಿದೆ. 14 ಕೋಟಿ ರು. ಠೇವಣಿ ಸಂಗ್ರಹಿಸಲಾಗಿದೆ. ಕೆಸಿಸಿ ಬ್ಯಾಂಕ್ ಈಗ ಲಾಭದತ್ತ ಬಂದಿದ್ದು, ಇದೀಗ ಶಿಕ್ಷಣ ಕ್ಷೇತ್ರಕ್ಕೆ 10 ಲಕ್ಷ ರು. ಮೊತ್ತದ ಚೆಕ್ ವಿತರಿಸುವ ಕಾರ್ಯಕ್ರಮವನ್ನೂ ಸಮಾರಂಭದಲ್ಲಿ ಹಮ್ಮಿಕೊಂಡಿದೆ. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರದ ಸಹಕಾರವೂ ಅಗತ್ಯವಾಗಿದೆ. ಲಕ್ಷ್ಮಣ ಸವದಿ ಅವರು ಸಚಿವರಾದ ಬಳಿಕ ಉತ್ತರ ಕರ್ನಾಟಕಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಪದವೀಧರ ಯುವಕರಿಗೆ ಆರು ತಿಂಗಳ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವುದರ ಜತೆಗೆ ಸಹಕಾರಿ ಸಂಸ್ಥೆಗಳ ಲೆಕ್ಕಪರಿಶೋಧನೆ (ಆಡಿಟ್) ಕಾರ್ಯಕ್ಕೆ ಯುವಜನರನ್ನು ಸಜ್ಜುಗೊಳಿಸುವ ಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಳಗಾವಿ ಪ್ರಾಂತದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಕಲ್ಲಪ್ಪ ಓಬಣ್ಣಗೋಳ ಮಾತನಾಡಿ, ನ. 14ರಿಂದ ಪ್ರತಿವರ್ಷ ದೇಶಾದ್ಯಂತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಕಳೆದ ವರ್ಷ ಹಾವೇರಿಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವರ್ಷವೂ ನ.15ರಂದು ಹಿರೇಕೆರೂರಿನಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ನಡೆಯಲಿದೆ. ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಂಘ-ಸಂಸ್ಥೆಗಳಿಗೆ ಸನ್ಮಾನ ಹಾಗೂ ಸಾಧಕ ಸಹಕಾರಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಲಿಂಗರಾಜ ಚಪ್ಪರದಹಳ್ಳಿ, ಬಸವರಾಜ ಅರಬಗೊಂಡ, ಬಸನಗೌಡ ಪಾಟೀಲ, ಎಸ್.ಬಿ. ತಿಪ್ಪಣ್ಣವರ, ಮಲ್ಲಿಕಾರ್ಜುನ ಸಾತೇನಹಳ್ಳಿ, ಸಹಕಾರಿ ಇಲಾಖೆ ಅಧಿಕಾರಿಗಳಾದ ಮಧುಶ್ರೀನಿವಾಸ, ವಿಕ್ರಮ್ ಕುಲಕರ್ಣಿ, ಎಸ್.ಜಿ. ಸುಣಗಾರ ಇತರರು ಇದ್ದರು.

ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ದೇಶದ ಪ್ರತಿಯೊಂದು ಹಂತದಲ್ಲೂ ಸಹಕಾರಿ ವ್ಯವಸ್ಥೆ ಮುನ್ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದೆ. ಸರ್ವಜ್ಞನ ಜನ್ಮಭೂಮಿಯಲ್ಲಿ ನಡೆಯುತ್ತಿರುವ ಈ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸಹಕಾರಿ ಧುರೀಣರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಪಾಟೀಲ ಹೇಳಿದರು.