ಸಾರಾಂಶ
- ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡಿದ್ದ ಮಾಲೀಕರು । 30ಕ್ಕೂ ಹೆಚ್ಚು ತಳಿ, 150ಕ್ಕೂ ಅಧಿಕ ಶ್ವಾನಗಳು ಭಾಗಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ 7ನೇ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಿತು. ಮುದ್ದು ಮುದ್ದಾದ ತಳಿಗಳ ಜೊತೆಗೆ ಮತ್ತು ಅಷ್ಟೇ ಭಯ ಹುಟ್ಟಿಸುವಂತಹ ಭಯಾನಕ ತಳಿಗಳ ಶ್ವಾನಗಳು ಸಾರ್ವಜನಿಕರ ಗಮನ ಸೆಳೆದವು.ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಚೌಚೌ, ಸೆಂಟ್ ಬರ್ನಾಡ್, ಸೈಬೇರಿಯನ್ ಹಸ್ಕಿ, ರಾಟ್ ವಿಲ್ಲರ್, ಡಾಬರ್ ಮನ್, ಪಗ್, ಗ್ರೇಟ್ ಡೆನ್, ಪಿಟ್ ಬುಲ್, ಡ್ಯಾಶ್ ಹೌಂಡ್, ಸಿಡ್ಜು, ಲೆಬ್ರಡಾರ್, ಗೊಲ್ಡನ್ ರಿಟವಿಲ್ಲರ್, ಪೆಮೊರಿಯನ್, ಮುಧೋಳ ಹೌಂಡ್, ಬಾಕ್ಸರ್, ಬ್ರಿಟಿಷ್ ಬುಲ್ಡಾಗ್ ಹೀಗೆ ವಿಭಿನ್ನ ತಳಿಗಳ ಶ್ವಾನಗಳು ಎಲ್ಲರ ಗಮನ ಸೆಳೆದವು.
ಶ್ವಾನದ ನಡುಗೆ, ದೇಹಾಕಾರ, ಹಲ್ಲು ಹಾಗೂ ನಾಯಿಯ ವರ್ತನೆ ಆಧಾರದಲ್ಲಿ ಸ್ಪರ್ಧೆ ನಡೆಯಿತು. ಪ್ರತಿ ಸುತ್ತಿನ ಸ್ಪರ್ಧೆಯಲ್ಲಿ ನಾಯಿಗಳು ರ‍್ಯಾಂಪ್ ವಾಕ್‌ನಂತೆ ಬಹಳ ನಾಜೂಕಿನ ಹೆಜ್ಜೆ ಹಾಕಿದವು. ಕೆಲವೊಂದು ತಳಿಗಳ ನಾಯಿಗಳು ನೋಡಲಿಕ್ಕೆ ಭಯ ಹುಟ್ಟಿಸುವಂತಿದ್ದರೂ ಬಹಳ ಸ್ನೇಹಮಯಿಯಾಗಿದ್ದವು.ಸುತ್ತಿನಿಂದ ಸುತ್ತಿಗೆ ಸ್ಪರ್ಧೆ ತೀವ್ರಗೊಂಡಂತೆ ನಾಯಿಗಳ ಪ್ರದರ್ಶನವೂ ಅತ್ಯಾಕರ್ಷಕವಾಗಿತ್ತು. ತಮ್ಮ ಮಾಲೀಕ, ತರಬೇತುದಾರರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದ ನಾಯಿಗಳ ಪ್ರರ್ದಶನ ಮಾಲೀಕರು, ತರಬೇತುದಾರರಿಗೆ ಮಾತ್ರವಲ್ಲದೇ, ನೋಡುಗರಿಗೂ ಉತ್ತೇಜನ, ಮುದ ನೀಡುವಂತಿತ್ತು.
ಚಿಕ್ಕಮಗಳೂರು, ಮಂಗಳೂರು, ಮಂಡ್ಯ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ತುಮಕೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 30 ತಳಿಗಳ 150ಕ್ಕೂ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಶ್ವಾನ ಪ್ರದರ್ಶನದಲ್ಲಿ ಪುಟ್ಟ ತಳಿಗಳಿಂದ ಹಿಡಿದು ದೊಡ್ಡ ತಳಿಗಳವರೆಗೂ ಭಾಗಿಯಾಗಿದ್ದ ಶ್ವಾನಗಳ ಸೆಲ್ಫಿ ತೆಗೆದುಕೊಳ್ಳಲು ಮಕ್ಕಳು, ಮಹಿಳೆಯರು, ಯುವಕ-ಯುವತಿಯರು ಮುಗಿಬಿದ್ದಿದ್ದರು.ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ ನಲ್ಲೂರು, ಶಿವಕುಮಾರ, ಸುನೀಲ್, ವಿನಾಯಕ, ಸಿದ್ದೇಶ, ರವಿವರ್ಮ, ವಿನಯ್ ಇತರರು ಇದ್ದರು.
- - --6ಕೆಡಿವಿಜಿ44, 45, 46, 47, 48, 49.ಜೆಪಿಜಿ:
ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ಶ್ವಾನ ಪ್ರದರ್ಶನ, ಸ್ಪರ್ಧೆಯಲ್ಲಿ ಮಾಲೀಕರೊಂದಿಗೆ ಭಾಗವಹಿಸಿದ ವಿವಿಧ ಶ್ವಾನಗಳು.