23ರಿಂದ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ:ಮಸನಾಯಕ್

| Published : Dec 22 2024, 01:33 AM IST

ಸಾರಾಂಶ

ನಮ್ಮ ರಾಜ್ಯದಲ್ಲಿ ಒಟ್ಟು 33 ಶೈಕ್ಷಣಿಕ ಜಿಲ್ಲೆಗಳಿದ್ದು ಎಲ್ಲ ಜಿಲ್ಲೆಗಳಿಂದ ಬಾಲಕರ ಮತ್ತು ಬಾಲಕಿಯರ ಫ್ಲೋರ್ ಬಾಲ್ ತಂಡಗಳು ಭಾಗವಹಿಸುವ ನಿರೀಕ್ಷೆ

ಗದಗ: ರಾಜ್ಯ ಪಪೂ ಕಾಲೇಜುಗಳ ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ ಡಿ. 23 ಹಾಗೂ 24 ರಂದು ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಟಗಾರರು ಆಗಮಿಸಲಿದ್ದಾರೆ ಎಂದು ಸಿದ್ದಲಿಂಗ ಬಂಡು ಮಸನಾಯಕ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ (ಪಪೂ) ಬೆಂಗಳೂರು, ಗದಗ ಜಿಲ್ಲೆ, ಜಿಲ್ಲಾ ಪಪೂ ಕಾಲೇಜುಗಳು ಪ್ರಾಚಾರ್ಯರ ಸಂಘ, ರಾಜ್ಯ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘ ಧಾರವಾಡ, ಜಿಲ್ಲಾ ಘಟಕ ಗದಗ, ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾ ಘಟಕ ಗದಗ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಜಿಲ್ಲಾ ಘಟಕ ಗದಗ, ಪಪೂ ಶಿಕ್ಷಣ ಇಲಾಖೆಯ ಬೋಧಕೇತರ ಸಂಘ ಬೆಂಗಳೂರು, ಜಿಲ್ಲಾ ಘಟಕ ಗದಗ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷ ಗದಗ ಜಿಲ್ಲೆಗೆ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ ಆಯೋಜಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಹಿಂದಿನ ವರ್ಷ ನಮ್ಮ ಜಿಲ್ಲೆಗೆ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ಆಯೋಜನೆ ಮಾಡಲು ಅವಕಾಶ ಕಲ್ಪಿಸಿದಾಗ ಆ ಪಂದ್ಯಾವಳಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದು ನಮಗೆ ಹೆಮ್ಮೆ ತಂದಿದೆ. ನಮ್ಮ ರಾಜ್ಯದಲ್ಲಿ ಒಟ್ಟು 33 ಶೈಕ್ಷಣಿಕ ಜಿಲ್ಲೆಗಳಿದ್ದು ಎಲ್ಲ ಜಿಲ್ಲೆಗಳಿಂದ ಬಾಲಕರ ಮತ್ತು ಬಾಲಕಿಯರ ಫ್ಲೋರ್ ಬಾಲ್ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಬೇರೆ-ಬೇರೆ ಜಿಲ್ಲೆಗಳಿಂದ ಬಂದ ತಂಡಗಳು ಡಿ. 22 ರಂದು ಮದ್ಯಾಹ್ನ 4 ಕ್ಕೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹೆಸರು ನೋಂದಾಯಿಸಲು ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ನೋಂದಾಯಿಸಿದ ನಂತರ ಬಾಲಕ ಮತ್ತು ಬಾಲಕಿಯರಿಗೆ ನಗರದ ವಿವಿಧ ವಸತಿ ನಿಲಯಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ನೋಂದಾಯಿತ ತಂಡಗಳು ತಮ್ಮ ತಮ್ಮ ವಸತಿ ಸ್ಥಳಕ್ಕೆ ತೆರಳಲು ವಾಹನ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಬಾಲಕ ಮತ್ತು ಬಾಲಕಿಯರಿಗೆ ಬೇರೆ ಬೇರೆ ವಸತಿ ನಿಲಯ ನಿಗದಿಪಡೆಸಿದ್ದು, ಅವುಗಳ ಮಾಹಿತಿ ನೋಂದಣಿ ಸ್ಥಳದಲ್ಲಿ ಒದಗಿಸಲಾಗಿದೆ. ವಸತಿ ನಿಲಯಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಲಾಗಿದ್ದು, ಪ್ರತಿ ನಿತ್ಯ ವಸತಿ ನಿಲಯದಿಂದ ಕ್ರೀಡಾಂಗಣಕ್ಕೆ ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಈ ವೇಳೆ ಜಿ.ಎನ್. ಕುರ್ತಕೋಟಿ, ಎಂ.ಸಿ. ಕಟ್ಟಿಮನಿ, ಎನ್.ಎಂ. ಪವಾಡಿಗೌಡ್ರ, ಅಶೋಕ ಅಂಗಡಿ, ಎಸ್.ಎಸ್. ಸೋಮಣ್ಣವರ, ವೈ.ಸಿ. ಪಾಟೀಲ, ಬಿ.ಜಿ. ಗಿರಿತಿಮ್ಮಣ್ಣವರ, ವಿ.ಎಂ. ಪಾಟೀಲ, ವಿ.ಎಸ್. ದಲಾಲಿ, ಅರ್ಜುನ್ ಗೊಳಸಂಗಿ, ದತ್ತಪ್ರಸನ್ ಪಾಟೀಲ, ಎಂ.ಕೆ. ಲಮಾಣಿ, ಎಚ್.ಎಸ್. ಶಿವಪ್ಪಯ್ಯನಮಠ ಹಾಗೂ ವೈ.ಎಸ್. ಹುನಗುಂದ ಉಪಸ್ಥಿತರಿದ್ದರು.