ಕೋಲಾರದಲ್ಲಿಂದು ರಾಜ್ಯ ಮಟ್ಟದ ಜನಪರ ಉತ್ಸವ

| Published : Feb 24 2025, 12:34 AM IST

ಸಾರಾಂಶ

ಉತ್ಸವದಲ್ಲಿ ಶೇ.೫೦ ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ ೯.೩೦ಕ್ಕೆ ನಗರದ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಮಾಡಿ ಜನಪದ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರವಿಶೇಷ ಘಟಕ ಯೋಜನೆಯಡಿ ರಾಜ್ಯ ಮಟ್ಟದ ಎರಡು ದಿನಗಳ ಜನಪರ ಉತ್ಸವ ಸೋಮವಾರ ನಗರದಲ್ಲಿ ಆರಂಭವಾಗಲಿದೆ. ವಿವಿಧ ಜಿಲ್ಲೆಗಳಿಂದ ೬೦ ಕಲಾ ತಂಡಗಳು, ೧,೫೦೦ಕ್ಕೂ ಅಧಿಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆಯಲಿರುವ ಉತ್ಸವಕ್ಕೆ ಸರ್ಕಾರ ೯೩ ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ಸಂಭಾವನೆಯನ್ನು ನೇರಪಾವತಿ ಮಾಡಲಾಗುವುದು ಎಂದರು.ಸ್ಥಳೀಯ ಕಲಾವಿದರಿಗೆ ಅ‍ವಕಾಶ

ಶೇ.೫೦ ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ ೯.೩೦ಕ್ಕೆ ನಗರದ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಮಾಡಿ ಜನಪದ ಕಲಾತಂಡಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಲಿದ್ದಾರೆ ಎಂದರು.ಮಧ್ಯಾಹ್ನ ೧೨ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸುರೇಶ್ ಉದ್ಘಾಟನೆ ನೆರವೇರಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಶಿವರಾಜ ತಂಗಡಗಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.ರಂಗಮಂದಿರದಲ್ಲಿ ಕವಿಗೋಷ್ಠಿ

ಟಿ.ಚನ್ನಯ್ಯ ರಂಗಮಂದಿರ ಹಾಗೂ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕವಿಗೋಷ್ಠಿಗೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಚಾಲನೆ ನೀಡಲಿದ್ದಾರೆ. ಸಾಹಿತಿ ಸುಬ್ಬು ಹೊಲೆಯಾರ್ ಅಧ್ಯಕತೆ ವಹಿಸಲಿದ್ದಾರೆ. ನೇತ್ರಾವತಿ ಆಶಯ ನುಡಿಯಲಿದ್ದು, ೨೦ಕ್ಕೂ ಅಧಿಕ ಕವಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಹಾಡು ಹುಟ್ಟಿದ ಗಳಿಗೆ, ಗಾಯನ, ಮಕ್ಕಳ ರಂಗರೂಪಕ ಕಾರ್ಯಕ್ರಮ ನಡೆಯಲಿವೆ. ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ ಜನಪರ, ಜನಪದ ಮತ್ತು ಗೀತ ಗಾಯನ ಸಂಭ್ರಮ ನಡೆಯಲಿದೆ.ರಂಗಮಂದಿರದಲ್ಲಿ ಫೆ.೨೫ರಂದು ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದುವರಿದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣ ಕುರಿತ ವಿಚಾರಗೋಷ್ಠಿ ನಡೆಯಲಿದೆ. ದಲಿತ ಮುಖಂಡ ಎನ್.ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಇಂದೂಧರ ಹೊನ್ನಾಪುರ ಅಧ್ಯಕ್ಷತೆ ವಹಿಸಲಿದ್ದು, ಮಾವಳ್ಳಿ ಶಂಕರ್ ಭಾಗವಹಿಸಲಿದ್ದಾರೆ. ನಾಳೆ ಸಮಾರೋಪ

ಸಂಜೆ ಜನಪರ ಗಾಯನ, ಅಂಬೇಡ್ಕರ್ ಕುರಿತು ನೃತ್ಯ ರೂಪಕ ಇರಲಿದೆ. ೨೫ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ ದೇವನಾಂಪ್ರಿಯ ನಾಟಕ ಇರಲಿದೆ. ಜನಪರ ನಾದಧ್ವನಿ-ಕಲಾ ವೈಭವ ನಡೆಯಲಿದೆ. ವಸ್ತು ಪ್ರದರ್ಶನ ನಡೆಯಲಿದ್ದು, ಅಂಬೇಡ್ಕರ್ ಸಾಧನೆ ನಡೆಯಲಿದೆ. ಕೆಜಿಎಫ್ ಭೇಟಿಯ ಕ್ಷಣ ಪ್ರದರ್ಶಿಸಲಾಗುವುದು. ಸಿರಿಧಾನ್ಯಗಳ ಪ್ರದರ್ಶನ ಇರಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಬಾಗೇವಾಡಿ, ಉಪನಿರ್ದೇಶಕ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್.ಛಲವಾದಿ, ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಇದ್ದರು.