ಶ್ರೀಜ್ವಾಲಾಮಾಲಿನಿ ಮಹಿಳಾ ಸಮಾಜ ನೇತೃತ್ವದಲ್ಲಿ ಶ್ರೀ ಅನಂತನಾಥ ದಿಗಂಬರ ಜೈನ ಸಮಾಜ ಯುವ ಮಂಡಳಿ ಸಹಯೋಗದಲ್ಲಿ ಡಿ.೨೧ರಂದು ಬೆಳಗ್ಗೆ ೧೧ ಗಂಟೆಗೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಾಜ್ಯಮಟ್ಟದ ಬೃಹತ್ ಕಾರ್ಯಕಾರಿಣಿ ಸಭೆ ಮತ್ತು ಚಿಂತನಾ ಸಮಾವೇಶ ನಗರದ ಜೈನ್ ಬಸ್ತಿ ಆವರಣದಲ್ಲಿರುವ ಮಹಾವೀರ ಭವನದಲ್ಲಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀಜ್ವಾಲಾಮಾಲಿನಿ ಮಹಿಳಾ ಸಮಾಜ ನೇತೃತ್ವದಲ್ಲಿ ಶ್ರೀ ಅನಂತನಾಥ ದಿಗಂಬರ ಜೈನ ಸಮಾಜ ಯುವ ಮಂಡಳಿ ಸಹಯೋಗದಲ್ಲಿ ಡಿ.೨೧ರಂದು ಬೆಳಗ್ಗೆ ೧೧ ಗಂಟೆಗೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಾಜ್ಯಮಟ್ಟದ ಬೃಹತ್ ಕಾರ್ಯಕಾರಿಣಿ ಸಭೆ ಮತ್ತು ಚಿಂತನಾ ಸಮಾವೇಶ ನಗರದ ಜೈನ್ ಬಸ್ತಿ ಆವರಣದಲ್ಲಿರುವ ಮಹಾವೀರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಪೂರ್ಣಿಮಾ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಮಧುಶ್ರೀ, ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯೆ ಪ್ರೀತಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೈನ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹರ್ಷ, ಸಹ ಕಾರ್ಯದರ್ಶಿ ಕವಿತಾ, ಖಜಾಂಚಿ ರೂಪಾ ಭಾಗವಹಿಸಲಿದ್ದು, ಒಕ್ಕೂಟದ ಸದಸ್ಯೆ ಪದ್ಮಶ್ರೀ ಪ್ರಾಸ್ತಾವಿಕ ನುಡಿಗಳನ್ನಾಡುವರು. ಜೈನ ಸಾಹಿತ್ಯಕ್ಕೆ ಜೈನ ಮಹಿಳೆಯರ ಕೊಡುಗೆ ಕುರಿತು ಪ್ರೀತಿ ಅವರು ಉಪನ್ಯಾಸ ನೀಡುವರು. ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ವಿವರವನ್ನು ಯಶೋದ ನೀಡಿದರೆ, ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಜಯಂತಿ ಅಭಿನಂದನಾ ನುಡಿಗಳನ್ನಾಡುವರು ಎಂದರು.

ಡಿ.೨೦ರಂದು ಮಧ್ಯಾಹ್ನ ೨.೩೦ರಿಂದ ಸಂಜೆ ೪ ಗಂಟೆಯವರೆಗೆ ಕಸದಿಂದ ರಸ ಮಹಿಳೆಯರಿಗಾಗಿ ಕಿರು ಸ್ಪರ್ಧೆ ನಡೆಯಲಿದೆ. ಡಿ.೨೧ರಂದು ಕಾರ್ಯಕಾರಿ ಸಮಿತಿ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ ೧ ಗಂಟೆಗೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಸಮಾವೇಶಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಲಿರುವ ಮಹಿಳಾ ಪ್ರತಿನಿಧಿಗಳ ಸಮ್ಮುಖದಲ್ಲಿ ಸಮಾಜ ಮತ್ತು ನಾಡಿನ ಹಿತದೃಷ್ಟಿಯಿಂದ ಮೂರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ಜನರಿಗೆ ಅರಿವು ಮೂಡಿಸಲಾಗುವುದು. ಕನ್ನಡದ ಆದಿ ಕವಿ ಪಂಪ, ರನ್ನ, ಜನ್ನರಿಂದ ಹಿಡಿದು ರತ್ನಾಕರವರ್ಣಿಯವರೆಗೆ ಜೈನ ಸಾಹಿತ್ಯವು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಈ ಐತಿಹಾಸಿಕ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಮಹಿಳಾ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ ಎಂದರು.

ಜೈನ ಸಮುದಾಯವು ರಾಷ್ಟ್ರಮಟ್ಟದಲ್ಲಿ ಅತಿ ಸೂಕ್ಷ್ಮ ಅಲ್ಪಸಂಖ್ಯಾತವೆಂದು ಗುರುತಿಸಲ್ಪಟ್ಟಿದೆ. ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮದಡಿ ಮಹಿಳಾ ಸಬಲೀಕರಣಕ್ಕಾಗಿ ಮೀಸಲಿರುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಆಗುತ್ತಿರುವ ವಿಳಂಬ ಮತ್ತು ಜಾಗೃತಿ ಕೊರತೆಯನ್ನು ಈ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗುವುದು. ಸಮುದಾಯದ ಮಹಿಳೆಯರಿಗೆ ಶೈಕ್ಷಣಿಕ ಮತ್ತು ಆರ್ಥಿಕ ಸವಲತ್ತುಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಮಹಿಳೆಯರ ಸ್ವಾವಲಂಬನೆ ಮತ್ತು ಪರಿಸರ ಸಂರಕ್ಷಣೆ ಉದ್ದೇಶದಿಂದ ಕಸದಿಂದ ರಸ ಎಂಬ ವಿನೂತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮನೆಯಲ್ಲಿ ತ್ಯಾಜ್ಯವೆಂದು ಎಸೆಯುವ ವಸ್ತುಗಳನ್ನು ಬಳಸಿಕೊಂಡು ಕಲಾತ್ಮಕ ಮತ್ತು ಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸುವ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಕುಸುಮಾ, ರಂಜಿತಾ, ರತ್ನ, ಅನುಷಾ ಇದ್ದರು.