ಕನ್ನಡಪ್ರಭ ವಾರ್ತೆ ಕಾರವಾರ

ನಿರುದ್ಯೋಗ ಸಮಸ್ಯೆ ನಿವಾರಿಸಿ ಸ್ವಾವಲಂಬಿ ಹಾಗೂ ಉದ್ಯೋಗವಂತ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದ, ಹೊನ್ನಾವರದ ಪ್ರತಿಷ್ಠಿತ ಎಂಪಿಇ ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜು ಹಾಗೂ ಉತ್ತರ ಕನ್ನಡ ಜಿಲ್ಲಾ ಶಿಕ್ಷಕರ ನಿರಂತರ ಸಹಾಯವಾಣಿ ಇವರ ಜಂಟಿ ಆಶ್ರಯದಲ್ಲಿ ಏ. 25ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ ಪದವಿ ಕಾಲೇಜಿನ ಪಿಆರ್‌ಓ ಡಾ. ಡಿ.ಎಲ್. ಹೆಬ್ಬಾರ್ ತಿಳಿಸಿದರು.ಕಾರವಾರದಲ್ಲಿ ಶನಿವಾರ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಾಲೇಜು ಆವರಣದಲ್ಲಿ ಈ ಮೇಳ ನಡೆಯಲಿದ್ದು, ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ವಿಳಂಬವಿಲ್ಲದೆ ಸ್ಥಳದಲ್ಲೇ ಆಫರ್ ಲೆಟರ್ ನೀಡುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಬೃಹತ್ ಉದ್ಯೋಗ ಮೇಳದಲ್ಲಿ ದೇಶದ ಪ್ರತಿಷ್ಠಿತ ಕಂಪನಿಯಾದ ಬಾಷ್, ಝೊಮ್ಯಾಟೊ ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಸಾಫ್ಟ್‌ವೇರ್, ಆಟೋಮೊಬೈಲ್ಸ್, ಬ್ಯಾಂಕಿಂಗ್, ವಿಮೆ, ಗಾರ್ಮೆಂಟ್ಸ್, ರಿಯಲ್ ಎಸ್ಟೇಟ್, ಆರೋಗ್ಯ, ಬಿಪಿಓ ಮತ್ತು ಆಹಾರ ತಂತ್ರಜ್ಞಾನ ಸೇರಿದಂತೆ ವಿವಿಧ ವಲಯಗಳ ನೂರಾರು ಸಂಸ್ಥೆಗಳು ನೇಮಕಾತಿಗೆ ಮುಂದಾಗಿವೆ. ಕಂಪನಿಗಳು ನೋಂದಣಿ ಮಾಡಿಕೊಂಡಿರುವ ಮಾಹಿತಿಯ ಪ್ರಕಾರ ಒಟ್ಟು 15,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇಲ್ಲಿ ಲಭ್ಯವಿವೆ. 7ನೇ ತರಗತಿ ಪಾಸಾದವರಿಂದ ಹಿಡಿದು ಯಾವುದೇ ಪದವಿ, ಬಿಸಿಎ ಹಾಗೂ ಎಂಸಿಎ ಮುಗಿಸಿದ ಅಭ್ಯರ್ಥಿಗಳು ಕೂಡ ಇದರಲ್ಲಿ ಪಾಲ್ಗೊಳ್ಳಬಹುದು. ಕೇವಲ ವಿದ್ಯಾವಂತರಿಗಷ್ಟೇ ಅಲ್ಲದೆ, ಅಡುಗೆಯವರು, ವಾಚ್‌ಮ್ಯಾನ್ ಹಾಗೂ ಅಂಗವಿಕಲರಿಗೂ ಸೂಕ್ತ ಉದ್ಯೋಗಾವಕಾಶಗಳು ಲಭ್ಯವಿವೆ ಎಂದರು.

ಜಿಲ್ಲಾ ಶಿಕ್ಷಕ-ಶಿಕ್ಷಕಿಯರ ನಿರಂತರ ಸಹಾಯವಾಣಿ ಅಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಯುಗಾದಿ ಪುರಸ್ಕಾರ 2026 ಪ್ರದಾನ ಹಾಗೂ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊ. 9880179177, 7483382074, 8147019630 ಅಥವಾ 9448435061 ಅನ್ನು ಸಂಪರ್ಕಿಸಬಹುದು ಎಂದರು.

ಕಾರ್ಯದರ್ಶಿ ಅಕ್ಷಯ ವಾಲೀಕರ, ಜಿಲ್ಲಾ ಆಟೋ ಚಾಲಕ ಮಾಲೀಕರ ಸಂಘದ ಉದಯ ನಾಯ್ಕ ಇದ್ದರು.