ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ: ಹುಬ್ಬಳ್ಳಿ ಅಕಾಡೆಮಿಗೆ 23 ಪದಕ

| Published : Jul 19 2024, 12:46 AM IST

ಸಾರಾಂಶ

ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ಜು. 13ರಿಂದ ನಡೆಯುತ್ತಿರುವ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿ 23 ಪದಕ ಪಡೆಯುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರದಿಂದ ಏರ್ ಪಿಸ್ತೂಲ್ ವಿಭಾಗ ನಡೆಯಲಿದೆ.

ಹುಬ್ಬಳ್ಳಿ:

ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ಜು. 13ರಿಂದ ನಡೆಯುತ್ತಿರುವ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿ 23 ಪದಕ ಪಡೆಯುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರದಿಂದ ಏರ್ ಪಿಸ್ತೂಲ್ ವಿಭಾಗ ನಡೆಯಲಿದೆ. ಸ್ಪರ್ಧೆಯಲ್ಲಿ ಒಟ್ಟು 68 ಶೂಟರ್ಸ್‌ಗಳು ಭಾಗವಹಿಸಿದ್ದರು. ಎಲ್ಲ ಶೂಟರ್ಸ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಇದುವರೆಗೆ 7 ಚಿನ್ನ, 8 ಬೆಳ್ಳಿ, 8 ಕಂಚು ಸೇರಿ ಒಟ್ಟು 23 ಪದಕ ಬಾಚಿದ್ದಾರೆ.ಚಿನ್ನದ ಪದಕ:

ಬೃಂದಾ ಮಾರೋಳ 10 ಮೀಟರ್ ಏರ್ ರೈಫಲ್, ಸೀನಿಯರ್, ಜೂನಿಯರ್, ಯೂತ್, ಸಬ್ ಯುತ್ ಸ್ಪರ್ಧೆ ಸೇರಿದಂತೆ ಒಟ್ಟು 4, 50 ಮೀಟರ್ 3 ಪೊಸಿಷನ್, 50 ಮೀಟರ್ ಪ್ರೌನ್, 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ರಾಕೇಶ್ ನಿಡಗುಂದಿ (ವಿಶೇಷ ಚೇತನ ಶೂಟರ್) ಒಟ್ಟು 3 ಚಿನ್ನದ ಪದಕ ಪಡೆದಿದ್ದಾರೆ.

ಬೆಳ್ಳಿ ಪದಕ:

50 ಮೀಟರ್‌ ಪ್ರೌನ್, 50 ಮೀಟರ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸಚಿನ ಸಿದ್ದಣ್ಣವರ (ವಿಶೇಷಚೇತನ ಶೂಟರ್) ಒಟ್ಟು 2 ಪದಕ, 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ವೈಯಕ್ತಿಕ ಮತ್ತು ತಂಡ, 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್, 50 ಮೀಟರ್ ಫ್ರೀ ಪಿಸ್ತೂಲ್‌ನಲ್ಲಿ ಮೊಹಮ್ಮದ್ ಅಜಮಲ್ 3 ಬೆಳ್ಳಿ, 50 ಮೀಟರ್ ಪ್ರೌನ್‌ನಲ್ಲಿ ಪುನೀಯ, 10 ಮೀಟರ್ ಏರ್ ರೈಫಲ್‌ನಲ್ಲಿ ಶಂಕರಲಿಂಗ ತವಳಿ (ವಿಶೇಷ ಚೇತನ ಶೂಟರ್), 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಐಶ್ವರ್ಯ ಬಾಲೆಹೊಸೂರ ಹೀಗೆ ತಲಾ ಒಂದೊಂದು ಬೆಳ್ಳಿಯ ಪದಕ ಪಡೆದಿದ್ದಾರೆ.

ಕಂಚಿನ ಪದಕ:

50 ಮೀಟರ್ ಪ್ರೊನ್‌ನಲ್ಲಿ ಜ್ಯೋತಿ ಸಣ್ಣಕ್ಕಿ (ವಿಕಲ ಚೇತನ ಶೂಟರ್), 50 ಮೀಟರ್ 3 ಪೊಸಿಷನ್ ಸ್ಪರ್ಧೆಯಲ್ಲಿ ಶಂಕರಲಿಂಗ ತವಳಿ (ವಿಶೇಷಚೇತನ ಶೂಟರ್), 10 ಮೀಟರ್ ಏರ್ ರೈಫಲ್‌ನಲ್ಲಿ ಸಚಿನ ಸಿದ್ದಣ್ಣವರ, 50 ಮೀಟರ್ ಪ್ರೊನ್ ಮಹಿಳೆ ಸ್ಪರ್ಧೆಯಲ್ಲಿ ಪುನೀಯ, 50 ಮೀಟರ್ 3 ಪೊಸ್ಸಿಷನ್‌ನಲ್ಲಿ ವರ್ಷಿಣಿ, 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್‌ನಲ್ಲಿ ಅಜ್ಮಲ್ ಹೀಗೆ ಒಂದೊಂದು ಕಂಚಿನ ಪದಕ ಪಡೆದರು.

ತಂಡದ ವಿಭಾಗ:

ಮಹಿಳೆಯರ 10 ಮೀಟರ್ ಏರ್ ರೈಫಲ್ ಯೂತ್ ಸ್ಪರ್ಧೆಯಲ್ಲಿ ಸೌಂದರ್ಯ ಬಾಲೆಹೊಸೂರ, ಬೃಂದಾ ಮಾರೋಳ, ಕೀರ್ತಿ ಬಾಲೆಹೊಸೂರ ಕಂಚಿನ ಪದಕ ಪಡೆದರೆ, ಪುರುಷರ 10 ಮೀಟರ್ ಏರ್ ಲೈಫಲ್ ಯೂತ್‌ನಲ್ಲಿ ಆದರ್ಶ ನಿಕಮ್, ಹರ್ಷ ಭದ್ರಾಪುರ, ಶ್ರೀಕರ್ ಸಬನಿಸ್ ಕಂಚಿನ ಪದಕ ಪಡೆದಿದ್ದಾರೆ.

ಪದಕ ಪಡೆದ ಮತ್ತು ಭಾಗವಹಿಸಿದ 25 ಶೂಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದಾರೆ. ಶುಕ್ರವಾರದಿಂದ ಏರ್ ಪಿಸ್ತೂಲ್ ವಿಭಾಗ ನಡೆಯಲಿದೆ. ಅದರಲ್ಲಿ ಹುಬ್ಬಳ್ಳಿ ಅಕಾಡೆಮಿಯಿಂದ 35 ಶೂಟರ್‌ಗಳು ಭಾಗವಹಿಸುತ್ತಿದ್ದಾರೆ. ಇನ್ನೂ ಹಲವಾರು ಪದಕಗಳು ಬರುವ ನಿರೀಕ್ಷೆಯಿದೆ.

ಪದಕ ಪಡೆದ ಶೂಟರ್ಸ್‌ಗಳಿಗೆ ಅಕಾಡೆಮಿ ಸಂಸ್ಥಾಪಕ ಶಿವಾನಂದ ಬಾಲೆಹೊಸೂರ, ತರಬೇತಿ ನೀಡಿದ ಮಾಜಿ ಸೈನಿಕ ಮತ್ತು ರಾಷ್ಟ್ರಮಟ್ಟದ ಶೂಟರ್‌ ರವಿಚಂದ್ರ ಬಾಲೆಹೊಸೂರು ಅಭಿನಂದನೆ ಸಲ್ಲಿಸಿದ್ದಾರೆ.