ಮಂಗಳೂರಿನಲ್ಲಿ 4, 5ರಂದು ರಾಜ್ಯಮಟ್ಟದ ಗೆಡ್ಡೆ ಗೆಣಸು, ಸೊಪ್ಪಿನ ಮೇಳ

| Published : Jan 03 2025, 12:32 AM IST

ಮಂಗಳೂರಿನಲ್ಲಿ 4, 5ರಂದು ರಾಜ್ಯಮಟ್ಟದ ಗೆಡ್ಡೆ ಗೆಣಸು, ಸೊಪ್ಪಿನ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಜ.4ರಂದು ಸಂಜೆ 6.30ರಿಂದ ರಾಜ್ಯ ಪ್ರಶಸ್ತಿ ವಿಜೇತ ಲಾಕುಂಭ ಕಲಾವಿದರಿಂದ ತುಳುನಾಡ ವೈಭವ ನೃತ್ಯರೂಪಕ, ಜ.5ರಂದು ಮಧ್ಯಾಹ್ನ 2.30ರಿಂದ ಪಿರಿಯಾಪಟ್ಟಣ ಜೇನುಕುರುಬ ಜನಾಂಗದ ಮಕ್ಕಳಿಂದ ಬುಡಕಟ್ಟು ನೃತ್ಯ, ಸರಯೂ ಬಾಲ ಯಕ್ಷ ವೃಂದದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಜ.4,5ರಂದು ಮಂಗಳೂರಿನ ಸಂಘನಿಕೇತನದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳ ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಸಾವಯವ ಬಳಗದ ಕಾರ್ಯಾಧ್ಯಕ್ಷ ಜಿ.ಆರ್. ಪ್ರಸಾದ್, ಮೇಳದಲ್ಲಿ 350ಕ್ಕೂ ವಿಧದ ಗಡ್ಡೆ ಗೆಣಸು ಹಾಗೂ 150ಕ್ಕೂ ವಿಧದ ಸೊಪ್ಪುಗಳ ಪ್ರದರ್ಶನ ಇರಲಿದೆ ಎಂದು ಹೇಳಿದರು.

ವಿವಿಧ ರಾಜ್ಯಗಳ ಗೆಡ್ಡೆಗಳು:

ಎರಡೂ ದಿನ ಬೆಳಗ್ಗೆ 9ರಿಂದ ಸಂಜೆ 7ರವೆಗೆ ನಡೆಯುವ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲದೆ, ಮಹಾರಾಷ್ಟ್ರ, ಒಡಿಶಾ, ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ರೈತರು ತಾವು ಬೆಳೆಸಿದ ಶುಂಠಿ, ಕೂವೆ ಗೆಡ್ಡೆ, ಹುತ್ತರಿ, ಪರ್ಪಲ್ ಯಾಮ್, ಬಿಳಿ ಸಿಹಿಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಷಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣಗೆಡ್ಡೆ, ಕೆಸು, ಹಳದಿ ಮತ್ತು ಕೆಂಪು ಸಿಹಿ ಗೆಣಸಿನ ಬೀಜದ ಗೆಡ್ಡೆ ಗೆಣಸು ಇತ್ಯಾದಿಗಳನ್ನು ಮಾರಾಟಕ್ಕೆ ತರಲಿದ್ದಾರೆ ಎಂದು ವಿವರಿಸಿದರು.

ಕೆಲವು ಸಾಮಾನ್ಯವಾಗಿ ಗೊತ್ತಿರುವ ಸೊಪ್ಪುಗಳು ಸೇರಿದಂತೆ ಅಪರೂಪದ ಸೊಪ್ಪುಗಳನ್ನು ಕೂಡ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿರಿಸಲಾಗುತ್ತದೆ. ಇದಲ್ಲದೆ ಸೊಪ್ಪು ಹಾಗೂ ಗೆಡ್ಡೆ ಗೆಣಸುಗಳ ತಾಜಾ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಜಿ.ಆರ್‌. ಪ್ರಸಾದ್‌ ತಿಳಿಸಿದರು.

ಕೃಷಿ ತರಬೇತಿ:

ಎರಡೂ ದಿನಗಳ ಕಾಲ ರೈತರಿಗಾಗಿ ಗೆಡ್ಡೆ ಗೆಣಸು ಮತ್ತು ಸೊಪ್ಪು ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗೆಡ್ಡೆ ಗೆಣಸಿನ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಈಗಾಗಲೇ ನಡೆಸಲಾಗಿರುವ ಪ್ರಬಂಧ ಸ್ಪರ್ಧೆ ಹಾಗೂ ಪೋಸ್ಟ್ ಕಾರ್ಡ್‌ನಲ್ಲಿ ಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಗೆಡ್ಡೆ ಗೆಣಸು ಹಾಗೂ ಸೊಪ್ಪು ಕೃಷಿಯ ಬಗ್ಗೆ ಮಾಹಿತಿ ಕೈಪಿಡಿಯೂ ಬಿಡುಗಡೆಯಾಗಲಿದೆ ಎಂದರು.

ಜ.4ರಂದು ಸಂಜೆ 6.30ರಿಂದ ರಾಜ್ಯ ಪ್ರಶಸ್ತಿ ವಿಜೇತ ಲಾಕುಂಭ ಕಲಾವಿದರಿಂದ ತುಳುನಾಡ ವೈಭವ ನೃತ್ಯರೂಪಕ, ಜ.5ರಂದು ಮಧ್ಯಾಹ್ನ 2.30ರಿಂದ ಪಿರಿಯಾಪಟ್ಟಣ ಜೇನುಕುರುಬ ಜನಾಂಗದ ಮಕ್ಕಳಿಂದ ಬುಡಕಟ್ಟು ನೃತ್ಯ, ಸರಯೂ ಬಾಲ ಯಕ್ಷ ವೃಂದದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು. ಗ್ರಾಹಕ ಬಳಗದ ಅಧ್ಯಕ್ಷ ಎಸ್.ಎ. ಪ್ರಭಾಕರ ಶರ್ಮಾ, ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ, ಸಮಿತಿ ಸಂಚಾಲಕ ಎ. ಸೋಮಪ್ಪ ನಾಯ್ಕ, ರಾಮಚಂದ್ರ ಇದ್ದರು.