ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯಕ್ರಮದ ಜತೆಗೆ ದೈಹಿಕ ಶಿಕ್ಷಣವು ಅತ್ಯಂತ ಮಹತ್ವ ಪಾತ್ರ ವಹಿಸುತ್ತದೆ.
ಹಳಿಯಾಳ: ಆಧುನಿಕ ತಂತ್ರಜ್ಞಾನದ ಎಂಜಿನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರೂ ನಮ್ಮ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಪ್ಪಟ ದೇಶಿ ಗ್ರಾಮೀಣ ಕ್ರೀಡೆ ಕುಸ್ತಿಯಲ್ಲಿ ಆಸಕ್ತಿಯನ್ನು ಬೆಳೆಸಿರುವುದು ಉತ್ತಮ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಬೆಳಗಾವಿ ವಿಟಿಯುನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಜೇಶ್ ವೈ.ಎಚ್. ಹೇಳಿದರು.
ಸೋಮವಾರ ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಗೊಂಡ ಎರಡೂ ದಿನಗಳ ಬೆಳಗಾವಿ ವಿಟಿಯು ಅಂತರ್ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯಕ್ರಮದ ಜತೆಗೆ ದೈಹಿಕ ಶಿಕ್ಷಣವು ಅತ್ಯಂತ ಮಹತ್ವ ಪಾತ್ರ ವಹಿಸುತ್ತದೆ ಎಂದರು. ಪಂದ್ಯಾವಳಿಯನ್ನು ಸಂಯೋಜಿಸುತ್ತಿರುವ ಸ್ಥಳೀಯ ವಿಡಿಐಟಿ ಕಾಲೇಜಿನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಅವರು, ಸೋಲು- ಗೆಲುವುಗಳ ಲೆಕ್ಕಾಚಾರ ಹಾಕದೆ ಕ್ರೀಡಾ ಸ್ಫೂರ್ತಿಯಿಂದ ಕುಸ್ತಿ ಆಡುವಂತೆ ಕುಸ್ತಿ ಪಟುಗಳನ್ನು ಹುರಿದುಂಬಿಸಿದರು. ಮಹಾವಿದ್ಯಾಲಯಕ್ಕೆ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯ ಆತಿಥ್ಯ ವಹಿಸಲು ಅವಕಾಶ ಮಾಡಿಕೊಟ್ಟ ವಿಟಿಯು ಬೆಳಗಾವಿಗೆ ಧನ್ಯವಾದ ತಿಳಿಸಿದರು.ವಿಟಿಯು ಬೆಳಗಾವಿಯ ಪ್ರಾದೇಶಿಕ ನಿರ್ದೇಶಕ ಡಾ. ಬಿ. ಮಂಜುನಾಥ್ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎಸ್. ಯಲ್ಲೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಸ್ತಿ ಪಂದ್ಯಾವಳಿಯ ಮಾಹಿತಿಯನ್ನು ನೀಡಿದರು. ಕುಮಾರಿ ರಕ್ಷಿತಾ ವೈದ್ಯ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ವಿಭಾಗದ ಡೀನ್ ಗಳು, ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ಕುಸ್ತಿ ಪಂದ್ಯಾವಳಿ: ರಾಜ್ಯದಲ್ಲಿನ ಪ್ರತಿಷ್ಠಿತ 52 ಎಂಜಿನಿಯರಿಂಗ್ ಕಾಲೇಜಿನ 169 ವಿದ್ಯಾರ್ಥಿಗಳು ಹಾಗೂ 57 ವಿದ್ಯಾರ್ಥಿನಿಯರು ಎರಡು ದಿನಗಳ ಕಾಲ ಜರುಗಲಿರುವ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.