ಕದಂಬೋತ್ಸವದಲ್ಲಿ ರಾಜ್ಯಮಟ್ಟದ ಕುಸ್ತಿ: ಜಿಲ್ಲಾಧಿಕಾರಿ ಮಾನಕರ

| Published : Feb 28 2024, 02:32 AM IST

ಸಾರಾಂಶ

ಬನವಾಸಿಯಲ್ಲಿ ಮಾ. 5 ಮತ್ತು 6ರಂದು ನಡೆಯುವ ಕದಂಬೋತ್ಸವದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ ಆಯೋಜಿಸಲಾಗುತ್ತಿದೆ.

ಕಾರವಾರ:

ಬನವಾಸಿಯಲ್ಲಿ ಮಾ. 5 ಮತ್ತು 6ರಂದು ನಡೆಯುವ ಕದಂಬೋತ್ಸವದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ. 6ರಂದು ನಡೆಯುವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ಮುಕ್ತ ಅವಕಾಶವಿದ್ದು, ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ರಾಜ್ಯಮಟ್ಟದ ಪುರುಷ ಕುಸ್ತಿ ಸ್ಪರ್ಧೆ 65+ ಕೆಜಿಯಿಂದ 80 ಕೆಜಿ ವರೆಗಿನ ದೇಹತೂಕದಲ್ಲಿ ನಡೆಯಲಿದ್ದು, ವಿಜೇತರಿಗೆ ಕದಂಬ ಕೇಸರಿ ಪ್ರಶಸ್ತಿ ಹಾಗೂ ಬೆಳ್ಳಿ ಗದೆ ನೀಡಲಾಗುವುದು. ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಸ್ಪರ್ಧೆ 60+ ಕೆಜಿಯಿಂದ 76 ಕೆಜಿ ವರೆಗಿನ ದೇಹತೂಕದಲ್ಲಿ ನಡೆಯಲಿದ್ದು, ವಿಜೇತರಿಗೆ ಕದಂಬ ಮಹಿಳಾ ಕೇಸರಿ ಪ್ರಶಸ್ತಿ ಹಾಗೂ ಬೆಳ್ಳಿ ಗದೆ ನೀಡಲಾಗುವುದು ಎಂದು ತಿಳಿಸಿದ್ದಾರೆ.ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ 30 ಕೆಜಿ, 40 ಕೆಜಿ, 50 ಕೆಜಿ, 60 ಕೆಜಿ ಮತ್ತು 65 ಕೆಜಿ ವಿಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ನಡೆಯಲಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಮಾ. 6ರಂದು ಬೆಳಗ್ಗೆ 8 ಗಂಟೆಯಿಂದ ಕುಸ್ತಿ ಸ್ಪರ್ಧೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.