ಸಾರಾಂಶ
- ದೂಡಾ ಕಚೇರಿಯಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳ ಪ್ರಾಚಾರ್ಯರ ಸಭೆಯಲ್ಲಿ ಡಿಸಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಜ.5 ಮತ್ತು 6ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಸ್ಪರ್ಧೆಗಳು ನಡೆಯಲಿವೆ. ಇದರ ಅಂಗವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಲು ಜ.3ರಂದು ಯುವ ಸಮೂಹದಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.ದೂಡಾ ಕಚೇರಿಯಲ್ಲಿ ಸೋಮವಾರ ಯುವಜನೋತ್ಸವ ಕಾರ್ಯಕ್ರಮ ಅಂಗವಾಗಿ ವ್ಯಾಪಕ ಜಾಗೃತಿ ಮೂಡಿಸಲು ಸರ್ಕಾರಿ, ಖಾಸಗಿ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರೊಂದಿಗೆ ಏರ್ಪಡಿಸಲಾದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಜನೋತ್ಸವ ಸಾಂಸ್ಕೃತಿಕ ಹಬ್ಬ, ಯುವಜನತೆ ದೇಶದ ಆಸ್ತಿಯಾಗಿದ್ದು ಯುವಕ, ಯುವತಿಯರಲ್ಲಿ ಋಣಾತ್ಮಕ ಚಿಂತನೆಗಳನ್ನು ಬಿತ್ತಬೇಕಿದೆ. ಸಕಾರಾತ್ಮಕ ಚಿಂತನೆಗಳು ಯುವಜನೋತ್ಸವಗಳಿಂದ ಮೂಡಿ ಬರಲಿದ್ದು, ಯುವಜನತೆಯನ್ನು ಇದರಲ್ಲಿ ತೊಡಗಿಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪದವಿಪೂರ್ವ ಕಾಲೇಜುಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.ಜ.3ರಂದು ಬೆಳಗ್ಗೆ 8ರಿಂದ ಗುಂಡಿ ವೃತ್ತದ ಬಳಿಯಿಂದ ಜಾಥಾ ನಡೆಯಲಿದೆ. ಪ್ರತಿಯೊಂದು ಕಾಲೇಜಿನಿಂದ ಕನಿಷ್ಠ 100ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಭಾಗಿ ಆಗುವಂತೆ ಮಾಡಬೇಕಾಗಿದೆ. ಜೊತೆಗೆ ಒಂದೊಂದು ಕಾಲೇಜಿನಿಂದ ಪ್ರತ್ಯೇಕವಾಗಿ ವಿಷಯಾಧಾರಿತ ಘೋಷವಾಕ್ಯಗಳ ಫಲಕಗಳನ್ನು ಸಿದ್ಧಪಡಿಸಿಕೊಂಡು ಜಾಥಾದಲ್ಲಿ ಭಾಗವಹಿಸಲು ಮತ್ತು ವಿಶೇಷ ವೇಷಭೂಷಣದಲ್ಲಿಯೂ ವಿದ್ಯಾಥಿಗಳು ಭಾಗವಹಿಸಬಹುದು ಎಂದು ತಿಳಿಸಿದರು.
ಜಾಥಾ ಮಾರ್ಗ:ಗುಂಡಿ ವೃತ್ತದಿಂದ ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪಾಲಿಕೆ ಮುಂಭಾಗದಿಂದ ಎವಿಕೆ ಕಾಲೇಜು ರಸ್ತೆ ಮೂಲಕ ಮೋತಿ ವೀರಪ್ಪ ಕಾಲೇಜಿನವರೆಗೆ ಆಗಮಿಸಿ ಮುಕ್ತಾಯವಾಗಲಿದೆ. ಆಯಾ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಹೋಗುವ ಜವಾಬ್ದಾರಿ ನಿರ್ವಹಿಸಬೇಕೆಂದರು.
ಈ ಸಂದರ್ಭದಲ್ಲಿ ದೂಡಾ ಆಯುಕ್ತ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಹುಲಿಮನಿ ತಿಮ್ಮಣ್ಣ, ಸಹಕಾರ ಸಂಘಗಳ ಉಪನಿಬಂಧಕ ಮಧು ಶ್ರೀನಿವಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಯುವ ಪ್ರಶಸ್ತಿ ಪುರಸ್ಕೃತ ಮಾಗನಹಳ್ಳಿ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.- - - -31ಕೆಡಿವಿಜಿ42.ಜೆಪಿಜಿ:
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಕಾಲೇಜು ಪ್ರಾಚಾರ್ಯರ ಸಭೆ ನಡೆಯಿತು.