ಕೇಂದ್ರ ಬಜೆಟ್ ನಲ್ಲಿ ರಾಜ್ಯ ಕಡೆಗಣನೆ

| Published : Jul 26 2024, 01:35 AM IST

ಕೇಂದ್ರ ಬಜೆಟ್ ನಲ್ಲಿ ರಾಜ್ಯ ಕಡೆಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತುಮಕೂರು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ. ರಾಜ್ಯದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ ಎಂದು ಆಪಾದಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಭದ್ರಮ್ಮ ವೃತ್ತದಲ್ಲಿ ಚೆಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಭದ್ರಮ್ಮ ವೃತ್ತಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ತಲೆಯ ಮೇಲೆ, ಕೈಯಲ್ಲಿ ಚೊಂಬು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಈ ಬಾರಿಯೂ ಕರ್ನಾಟಕಕ್ಕೆ ಚೆಂಬು ನೀಡಿದೆ. ರಾಜ್ಯದಿಂದ ಬಿಜೆಪಿಯ ೧೯ ಜನ ಸಂಸತ್ ಸದಸ್ಯರು ಆಯ್ಕೆಯಾಗಿ, ನಾಲ್ವರು ಸಚಿವರಾಗಿದ್ದರೂ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ಮುಂದುವೆರಿಸಿದೆ ಎಂದು ಆಪಾದಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಕೇಂದ್ರ ಸರಕಾರದಲ್ಲಿ ರಾಜ್ಯದ 4 ಜನ ಮಂತ್ರಿಗಳಿದ್ದಾಗ್ಯೂ ರಾಜ್ಯಕ್ಕೆ ಬಿಜೆಪಿಯಿಂದ ಘನ ಘೋರ ಅನ್ಯಾಯವಾಗಿದೆ. ಮಿತ್ರ ಪಕ್ಷಗಳಿಂದ ಕುರ್ಚಿ ಉಳಿಸಿಕೊಳ್ಳಲು ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಬಜೆಟ್‌ನ ಬಹುಪಾಲು ನೀಡಿ, ಕರ್ನಾಟಕವನ್ನು ಕಡೆಗಣಿಸಲಾಗಿದೆ. ಇದರ ವಿರುದ್ದ ಮುಂದಿನ ಮೂರು ದಿನಗಳ ಕಾಲ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು. ರಾಜ್ಯದ ಬಹು ಪ್ರಮುಖ ನೀರಾವರಿ ಯೋಜನೆಯಾದ ಮೇಕುದಾಟುಗೆ ಅನುಮತಿ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ.ಅಲ್ಲದೆ ಚಾಲ್ತಿಯಲ್ಲಿದ್ದ ಹಲವಾರು ಯೋಜನೆಗಳಿಗೆ ಅನುದಾನ ನೀಡಿಲ್ಲ. ಸಚಿವ ಸೋಮಣ್ಣ ಅವರ ಆರಂಭ ಶುರತ್ವ ಕೆಲವೇ ದಿನಗಳಲ್ಲಿ ಬಯಲಾಗಿದೆ. ರಾಜ್ಯದ ಜನತೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ.ರಾಜ್ಯದ ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಚಂದ್ರಶೇಖರಗೌಡ ಆಗ್ರಹಿಸಿದರು.ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಕೇಂದ್ರದ ಮಲತಾಯಿ ಧೋರಣೆ ಈ ವರ್ಷದ ಬಜೆಟ್‌ನಲ್ಲಿಯೂ ಮುಂದುವರೆ ದಿದ್ದು, ಕರ್ನಾಟಕದಿಂದ ವಾರ್ಷಿಕ ಸುಮಾರು 4.50 ಲಕ್ಷ ಕೋಟಿಗೂ ಹೆಚ್ಚು ಜಿಎಸ್ಟಿ ಬಾಚಿಕೊಂಡು, ಉತ್ತರ ಭಾರತದ ಬಿಹಾರ ವನ್ನು ಉದ್ದಾರ ಮಾಡಲು ಹೊರಟಿದೆ. ಜಿಎಸ್ಟಿ ಪಾಲು ಪಡೆಯಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿಯೂ ಪ್ರಯೋಜನವಾಗದೆ, ಕೋರ್ಟು ಮೆಟ್ಟಿಲೇರಿ, ರಾಜ್ಯದ ಪಾಲು ಪಡೆಯುವಂತಹ ಸ್ಥಿತಿ ತಲುಪಿರುವುದು ಕೇಂದ್ರದ ಇಬ್ಬಗೆಯ ನೀತಿಗೆ ಹಿಡಿದ ಕನ್ನಡಿಯಾಗಿದೆ. ರೈತರ ಬಹುದಿನದ ಬೇಡಿಕೆ ಎಂಎಸ್ಪಿ ಕಾಯ್ದೆ ಜಾರಿಗೆ ತರದೆ ಮೋಸ ಮಾಡಿದೆ. ಅಲ್ಲದೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅನುದಾನ ಕಡಿತ ಮಾಡಿ ಜನರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ಮಾತನಾಡಿ, ಸಂವಿಧಾನ ಪ್ರಕಾರ ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು. ಆದರೆ ಉತ್ತರ ಭಾರತಕ್ಕೆ ಒಂದು ರೀತಿ, ದಕ್ಷಿಣ ಭಾರತಕ್ಕೆ ಒಂದು ರೀತಿ ಎಂಬಂತಹ ತಾರತಮ್ಯ ನೀತಿಯನ್ನು ಕೇಂದ್ರ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಹೆಚ್.ಸಿ.ಹನುಮಂತಯ್ಯ, ವಾಲೆಚಂದ್ರಯ್ಯ, ತರುಣೇಶ್, ಅಸ್ಲಾಂಪಾಷ, ಮಂಜುನಾಥ್, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸುಜಾತ, ಸಂಜೀವಕುಮಾರ್, ನಟರಾಜಶೆಟ್ಟಿ, ಜ್ವಾಲಮಾಲ ರಾಜಣ್ಣ, ರೇವಣ್ಣಸಿದ್ದಯ್ಯ,ಬೋವಿಪಾಳ್ಳ ಉಮೇಶ್, ಕೈದಾಳ ರಮೇಶ್, ಶಿವಾಜಿ, ಗೀತಾ, ಭಾಗ್ಯಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪೋಟೋ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ತುಮಕೂರಿನ ಭದ್ರಮ್ಮ ವೃತ್ತದಲ್ಲಿ ಚೆಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು.

----------- ಕೋಟ್‌

ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಿತ್ರ ಪಕ್ಷ ಅಧಿಕಾರದಲ್ಲಿರುವ ಬಿಹಾರಕ್ಕೆ 58 ಸಾವಿರ ಕೋಟಿ, ಆಂಧ್ರ ಪ್ರದೇಶಕ್ಕೆ 15ಸಾವಿರ ಕೋಟಿ ನೀಡಿ, ಕರ್ನಾಟಕಕ್ಕೆ ಚೆಂಬು ನೀಡಿದೆ. ಕರ್ನಾಟಕ ರಾಜ್ಯ ಸರಕಾರ ಸಮಾಜ ಕಲ್ಯಾಣ ಇಲಾಖೆಗೆ ವಾರ್ಷಿಕ 39 ಸಾವಿರ ಕೋಟಿ ರೂ ನೀಡಿದರೆ, ಕೇಂದ್ರ ಸರಕಾರ 30 ರಾಜ್ಯಗಳಿಗೆ ಸೇರಿ 56 ಸಾವಿರ ಕೋಟಿ ರೂ ನೀಡಿದೆ. ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಅಗತ್ಯವಿದೆಯೇ ?

-ಕೆಂಚಮಾರಯ್ಯ, ಹಿರಿಯ ಕಾಂಗ್ರೆಸ್ ಮುಖಂಡ