ಈ ಸಮ್ಮೇಳನದಲ್ಲಿ ದೇಶ ವಿದೇಶದಿಂದ 1500ಕ್ಕೂ ಅಧಿಕ ಎಲುಬು ಕೀಲು ತಜ್ಞ ವೈದ್ಯರು ಭಾಗವಹಿಸಲಿದ್ದು, ನಗರದ ಬಿಎಲ್‌ಡಿಇ ಸಂಸ್ಥೆಯ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಲಿದೆ

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ರಾಜ್ಯ ಎಲುಬು ಕೀಲು ವೈದ್ಯರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ 3 ದಿನಗಳ ರಾಜ್ಯ ವಾರ್ಷಿಕ ಸಮ್ಮೇಳನವನ್ನು ಜ.30, 31 ಹಾಗೂ ಫೆ.1ರಂದು ನಗರದ ಬಿಎಲ್‌ಡಿಇ ಡೀಮ್ಸ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಅಲ್ ಅಮೀನ ಮೆಡಿಕಲ್ ಕಾಲೇಜು ಹಾಗೂ ವಿಜಯಪುರ ಎಲುಬು ಕೀಲು ವೈದ್ಯ ಸಂಘಗಳ ಆಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಎಲುಬು ಕೀಲು ವೈದ್ಯರ ಸಂಘದ ಖಜಾಂಚಿ ಡಾ.ರವಿಕುಮಾರ ಬಿರಾದಾರ ಹೇಳಿದರು.

ನಗರದ ಬಿಎಲ್‌ಡಿಇ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ದೇಶ ವಿದೇಶದಿಂದ 1500ಕ್ಕೂ ಅಧಿಕ ಎಲುಬು ಕೀಲು ತಜ್ಞ ವೈದ್ಯರು ಭಾಗವಹಿಸಲಿದ್ದು, ನಗರದ ಬಿಎಲ್‌ಡಿಇ ಸಂಸ್ಥೆಯ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಜ.30ರಂದು ಸಂಜೆ 5ಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಎಲುಬು ಕೀಲು ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ನವೀನ ಥಕ್ಕರ ಭಾಗವಹಿಸಲಿದ್ದು, ಗೌರವಾನ್ವಿತ ಆಹ್ವಾನಿತರಾಗಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಬಿಎಲ್‌ಡಿಇ ಡೀಮ್ಸ್ ವಿಶ್ವ ವಿದ್ಯಾಲಯದ ಕುಲಾಧಿಪತಿ ಬಸನಗೌಡ ಪಾಟೀಲ, ಕುಲಪತಿ ಪ್ರೊ.ವೈ.ಎಂ.ಜಯರಾಜ, ಉಪಕುಲಪತಿ ಡಾ.ಅರುಣ ಇನಾಮದಾರ, ರಿಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ, ಪ್ರಾಂಶುಪಾಲರಾದ ಡಾ.ತೇಜಸ್ವಿನಿ ವಲ್ಲಭ, ಅಲ್ ಅಮೀನ ಚಾರಿಟೇಬಲ್ ಫಂಡ್ ಟ್ರಸ್ಟ್ ನ ಅಧ್ಯಕ್ಷ ಜಿಯಾಉಲ್ಲಾ ಷರೀಫ್, ಹಾಗೂ ನಿರ್ದೇಶಕ ಡಾ.ಬಿ.ಎನ್.ಪಾಟೀಲ ಭಾಗವಹಿಸಲಿದ್ದಾರೆ ಎಂದರು.

ರಾಜ್ಯ ಘಟಕದ ಅಧ್ಯಕ್ಷ ಡಾ.ಅನೀಲ ಪಾಟೀಲ ಮಾತನಾಡಿ, ಸಮ್ಮೇಳನದಲ್ಲಿ 1500 ಎಲುಬು ಕೀಲು ತಜ್ಞ ವೈದ್ಯರು ಭಾಗವಹಿಸಿ ಸುಮಾರು 700ಕ್ಕೂ ಹೆಚ್ಚು ಪ್ರಬಂಧಗಳ ಮಂಡನೆ ಅಲ್ಲದೆ ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಎಲುಬು ಕೀಲು ಬೆನ್ನೆಲುಬು ನರಗಳ ಅತ್ಯಾಧುನಿಕ ರೋಗ ನಿರ್ಣಯ ಸಂಕಿರಣ ಶಸ್ತ್ರಚಿಕಿತ್ಸೆಗಳು ಹಾಗೂ ವಿವಿಧ ಚಿಕಿತ್ಸೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದರು.

ಕಾರ್ಯದರ್ಶಿ ಡಾ.ಹರೀಶ ಮೂರ್ತಿ ಮಾತನಾಡಿ, ಎಲುಬು ಕೀಲು ವೈದ್ಯರ ಸಂಘದ ಹಿಂದಿನ 50 ವರ್ಷದ ರಾಜ್ಯ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯಾದ್ಯಂತ ಇರುವ ಹಿರಿಯ 50 ಎಲುಬು ಕೀಲು ವೈದ್ಯರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಗುವುದು. ಒಟ್ಟಾರೆಯಾಗಿ ಈ ಸಮ್ಮೇಳನ ಎಲುಬು ಕೀಲು ಬೆನ್ನೆಲುಬು ಚಿಕಿತ್ಸೆಗಳ ಬಗ್ಗೆ ಒಂದು ಹೊಸ ಆಯಾಮವನ್ನು ಸೃಷ್ಟಿ ಮಾಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಎಸ್.ಎಸ್.ನಂದಿ, ಡಾ.ಪ್ರಕಾಶ ಸಾಸನೂರ, ಡಾ.ರಾಮನಗೌಡ ಬಿರಾದಾರ ಇದ್ದರು.