ನರಸಿಂಹರಾಜಪುರಕೇಂದ್ರ ಸರ್ಕಾರ ರೂಪಿಸಿದ್ದ ₹35 ಸಾವಿರ ಆದಾಯ ವಿರುವವರಿಗೆ ಮಾತ್ರ ಪಿಂಚಣಿ ನೀಡಬೇಕೆಂಬ ನಿಯಮಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದು ₹1.35 ಲಕ್ಷ ಆದಾಯದವರಿಗೂ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
- ಕೇಂದ್ರದ ನಿಯಮಕ್ಕೆ ರಾಜ್ಯ ಸರ್ಕಾರದ ತಿದ್ದುಪಡಿ । ತಾಲೂಕು ಮಟ್ಟದ ಪ್ರಜಾಸೇವೆ ಅಂದೋಲನ । ನೂರಾರು ಜನರಿಂದ ಅರ್ಜಿ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಕೇಂದ್ರ ಸರ್ಕಾರ ರೂಪಿಸಿದ್ದ ₹35 ಸಾವಿರ ಆದಾಯ ವಿರುವವರಿಗೆ ಮಾತ್ರ ಪಿಂಚಣಿ ನೀಡಬೇಕೆಂಬ ನಿಯಮಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದು ₹1.35 ಲಕ್ಷ ಆದಾಯದವರಿಗೂ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಶನಿವಾರ ಬಿ.ಎಚ್.ಕೈಮರ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಪಿಂಚಣಿ ಪಲಾನುಭವಿ ಮಹಿಳೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಮುಂದಿನ 1 ವಾರದೊಳಗೆ ಪಿಂಚಣಿ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದರು.ಹೊನ್ನೇಕೊಡಿಗೆ ಗ್ರಾಪಂನ ದೇವಂತರಾಜ್ ಎಲಿಯಾಸ್ ಮಾತನಾಡಿ ನರಸಿಂಹರಾಜಪುರ– ಚಿಕ್ಕಮ ಗಳೂರು ಹಳೇ ರಸ್ತೆ ಅಭಿವೃದ್ಧಿಯಡಿ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಚಿವರು ₹50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅರಣ್ಯ ಇಲಾಖೆ ಭದ್ರಾ ಅಭಯಾರಣಕ್ಕೆ ಸೇರಿದ ಪ್ರದೇಶವೆಂದು ಡಿಪಿಆರ್ ಮಾಡಲು ಬೀಡುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.ಪ್ರತಿಕ್ರಯಿಸಿದ ಸಚಿವರು ಈಗಾಗಲೇ ಇರುವ ರಸ್ತೆ ಅಭಿವೃದ್ಧಿಪಡಿಸಲು ಆದೇಶವಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಅರಣ್ಯ ಇಲಾಖೆಗೆ ಹೇಗೆ ಸೇರುತ್ತದೆ. ಇರುವ ರಸ್ತೆ ಅಭಿವೃದ್ಧಿಪಡಿಸಬಾರದು ಎಂದು ಆದೇಶ ವಿದ್ದರೆ ತೋರಿಸಿ ಎಂದು ಅರಣ್ಯಾಧಿಕಾರಿಗೆ ಪ್ರಶ್ನಿಸಿದರು. ಮುತ್ತೋಡಿ ಅರಣ್ಯದಲ್ಲಿ ರಸ್ತೆ ಅಭಿವೃದ್ಧಿ ಪಡಿಸ ಲಾಗಿದೆ. ಅದಕ್ಕೊಂದು, ಇದಕ್ಕೊಂದು ಕಾನೂನು ಇದೆಯೇ. ಈ ಬಗ್ಗೆ ಅರಣ್ಯ ಸಚಿವ ರೊಂದಿಗೆ ಚರ್ಚಿಸ ಲಾಗುವುದು ಎಂದರು.
ಗ್ರಾಮಸ್ಥ ಕೈಮರದ ಯೋಗೀಶ್ ಮಾತನಾಡಿ ಹಲವು ವರ್ಷಗಳಿಂದ ಜಮೀನು ಪೋಡಿಗೆ ಅರ್ಜಿಸಲ್ಲಿ ಸಿದ್ದರೂ ಈವರೆಗೂ ಪೋಡಿಕೊಟ್ಟಿಲ್ಲ ಎಂದರು. ಕೊಪ್ಪ ಡಿಎಫ್ ಓ ಶಿವಶಂಕರ್ ಮಾಹಿತಿ ನೀಡಿ 2002ರಲ್ಲಿ ಡಿಸಿ ಸುಮಾರು 50ಸಾವಿರ ಹೆಕ್ಟೇರ್ ಪ್ರದೇಶವನ್ನು ಡಿಸಿ ಅರಣ್ಯ ಎಂದು ಆದೇಶ ಮಾಡಿದ್ದಾರೆ. ಪ್ರಸ್ತುತ ಜಂಟಿ ಸರ್ವೆ ನಡೆಯುತ್ತಿದ್ದ 185 ಗ್ರಾಮಗಳಲ್ಲಿ 99 ಗ್ರಾಮಗಳಲ್ಲಿ ಜಂಟಿ ಸರ್ವೆ ಮುಗಿದು ಫಾರಂ 50,53. 94ಸಿ ಅಡಿ ಅರ್ಜಿಸಲ್ಲಿಸಿದವರ ಪಕ್ಕಾ ಪೋಡಿ ಬಾಕಿಯಿದೆ. 86 ಗ್ರಾಮಗಳ 1527 ಸರ್ವೆ ನಂನಲ್ಲಿ 787 ಸರ್ವೆ ಮುಗಿದಿದೆ. 55 ಸಾವಿರ ಹೆ.ನಲ್ಲಿ ಬಾಕಿ ಇರುವ 33,700 ಹೆಕ್ಟೇರ್ ಸರ್ವೆ ಮುಗಿದ ಕೂಡಲೇ ಪರಿಹಾರ ಸಿಗಲಿದೆ ಎಂದರು.ಮುತ್ತಿನಕೊಪ್ಪ ಗ್ರಾಪಂ ಕೆ.ಕಣಬೂರು ಗ್ರಾಮದಲ್ಲಿ 350 ಎಕರೆ ಜಾಗ ಭದ್ರಾ ನಿರಾಶ್ರಿತರಿಗೆ ನೀಡಲಾಗಿದೆ. ಹಕ್ಕು ಪತ್ರಕ್ಕೆ 1962–63 ರಲ್ಲಿ ಅರಣ್ಯದಿಂದ ಕಂದಾಯಕ್ಕೆ ಜಮೀನು ಬಿಡುಗಡೆ ಆದೇಶ ಸಿಗುತ್ತಿಲ್ಲ. ಆದೇಶ ಸಿಕ್ಕರೆ ಶರಾವತಿ ಸಂತ್ರಸ್ತರ ರೀತಿ ಈ ಸಮಸ್ಯೆ ಬಗೆಹರಿಸಬಹುದೆಂದು ಡಿಎಫ್ ಓ ಮಾಹಿತಿ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಚಾನಲ್ ನಿರ್ಮಾಣ ಸಂದರ್ಭದಲ್ಲಿ ಬಂಡೆ ಸಿಡಿದು ಮನೆ ಮೇಲೆ ಬಿದ್ದು ಹಾನಿಯಾದರೂ ಒಂದು ರು. ಪರಿಹಾರ ನೀಡಿಲ್ಲ. ಮನೆ ನಿರ್ಮಾಣಕ್ಕೆ ₹15ಲಕ್ಷ ವೆಚ್ಚವಾಗಿದೆ. ನ್ಯಾಯ ಕೊಡಿಸು ವಂತೆ ಕೆ.ಕಣಬೂರು ಗ್ರಾಮಸ್ಥ ಕೆ.ಜೋನಿ ಮನವಿ ಮಾಡಿದರು. ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಎಂಜಿನಿಯರ್ ತಿಳಿಸಿದರು. ಈ ಬಗ್ಗೆ ಎಂಜಿನಿಯರ್ ಗೆ ತರಾಟೆ ತೆಗೆದು ಕೊಂಡ ಸಚಿವರು ಶೀಘ್ರ ಪರಿಹಾರ ಕೊಡಿಸಿ ವರದಿ ನೀಡುವಂತೆ ಸೂಚಿಸಿದರು.ಕೆ.ಕಣಬೂರು ಗ್ರಾಮದ ಸರ್ವೆ ನಂ 38ರಲ್ಲಿ ಜೀತಮುಕ್ತವಾಗಲು 1972–73ನೇ ಒಟ್ಟು 20 ಜನರಿಗೆ ಮಂಜೂ ರಾದ ಜಮೀನಿಗೆ ಪಕ್ಕಾಪೋಡಿ, ದುರಸ್ತಿ ಹಾಗೂ ಖಾತೆ ಮಾಡಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥ ಬಿ.ಎಸ್.ಸುಬ್ರಹ್ಮಣ್ಯ ಸಭೆ ಗಮನಕ್ಕೆ ತಂದರು. ಸಮಸ್ಯೆ ಶೀಘ್ರ ಇತ್ಯರ್ಥ ಪಡಿಸಲು ತಹಸೀಲ್ದಾರ್ ಗೆ ಸಚಿವರು ಸೂಚಿಸಿದರು.
ಮನೆ ಮೇಲೆ ಹಾದು ಹೋದ ವಿದ್ಯುತ್ ಮಾರ್ಗವನ್ನು ಬೇರೆಡೆಗೆ ವರ್ಗಾಯಿಸಲು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಮಾರ್ಗ ಬದಲಾವಣೆಗೆ ಹಣ ಪಾವತಿಸಲು ಹೇಳಿದ್ದಾರೆ ಎಂದರು. ಮೆಸ್ಕಾಂ ಎಂಜಿನಿಯರ್ ಸಿದ್ದೇಶ್ ಹಣಪಾವತಿಸದೆ ಉಚಿತ ವಿದ್ಯುತ್ ಮಾರ್ಗ ಬದಲಾವಣೆಗೆ ಇಲಾಖೆಯಲ್ಲಿ ಅವಕಾಶವಿಲ್ಲ ಎಂದಾಗ ಸಚಿವರು ನಾನು ಯಾವ ಇಲಾಖೆ ಸಚಿವ ಎಂದು ಪ್ರಶ್ನಿಸಿ ಸಾರ್ವಜನಿಕರಿಗೆ ಸಮಸ್ಯೆ ಯಾಗುತ್ತಿದ್ದರೆ ಇಲಾಖೆಯಿಂದ ವಿದ್ಯುತ್ ಮಾರ್ಗ ವರ್ಗಾಯಿಸಿ ವರದಿ ನೀಡುವಂತೆ ಸೂಚಿಸಿದರು.ಅಂಬೇಡ್ಕರ್ ನಗರದ ಗ್ರಾಮಠಾಣಾ ಪ್ರದೇಶದಲ್ಲಿ ಹಲವು ವರ್ಷಗಳಿಂದ ವಾಸವಿರುವವರಿಗೆ ಹಕ್ಕು ಪತ್ರ ನೀಡಿಲ್ಲ ಎಂದು ಡಿಎಸ್ ಎಸ್ ನ ರಾಮು, ಪವಿತ್ರ ತಿಳಿಸಿದರು. ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು ಶೀಘ್ರ ಹಕ್ಕು ಪತ್ರಕ್ಕೆ ಕ್ರಮ ಕೈವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.ಗ್ರಾಮಸ್ಥರ ಗಮನಕ್ಕೆ ತಾರದೆ ಅರಣ್ಯ ಹಕ್ಕು ಸಮಿತಿಯಡಿ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸುತ್ತಿರುವ ಬಗ್ಗೆ ಹೊನ್ನೆಕೂಡಿಗೆಯ ರಘು, ದೇವಂತ್,ಮನೋಹರ್ ಗಮನ ಸೆಳೆದರು. ಗ್ರಾಮ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆ ಅಧ್ಯಕ್ಷತೆಯನ್ನು ಶಾಸಕ ಟಿ.ಡಿ.ರಾಜೇಗೌಡ ವಹಿಸಿದ್ದರು. ವಿಪ ಸದಸ್ಯೆ ಡಾ.ಆರತಿ ಕೃಷ್ಣ, ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಡಿಸಿ ಭಂವರ್ ಸಿಂಗ್ ಮೀನಾ, ಜಿಪಮ ಸಿಇಒ ಎಚ್.ಎಸ್. ಕೀರ್ತನ. ಜಿಲ್ಲಾ ಎಸ್ಪಿ ಜಿತೇಂದ್ರ ಕುಮಾರ್ ದಯಾಮ, ಕೊಪ್ಪ ಡಿ.ಎಫ್.ಓ ಶಿವಶಂಕರ್,ಕೊಪ್ಪ ಎ.ಎಸ್.ಪಿ ಮೇಘ ಅಗರ್ ವಾಲ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಡಿ.ಎಸಿ.ಎಫ್ ಬೋರಯ್ಯ ಮತ್ತಿತರರು ಇದ್ದರು.