ಸಾರಾಂಶ
- ದಾವಣಗೆರೆಯಲ್ಲಿ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಲಗಾನ್ ಟೀಂ ಎತ್ತಿ ಕಟ್ಟಿದ್ರು - ಚುನಾವಣೆಗೆ ಮುನ್ನ ಲಗಾನ್ ಟೀಂಗೆ ಲಗಾಮು ಹಾಕಿದ್ದರೆ ಬಿಜೆಪಿ ಗೆಲ್ತಿತ್ತು
- ನಂಗೆ ಹೇಳೋ ಮಾತು ಚುನಾವಣೆ ಮುನ್ನ ತಂಡಕ್ಕೆ ಹೇಳಬೇಕಿತ್ತು- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ರೇಣುಕಾಚಾರ್ಯ ಮತ್ತು ತಂಡವನ್ನು ಬೆಳೆಸಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಎತ್ತಿ ಕಟ್ಟಿದ್ದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಆರೋಪಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ರೇಣುಕಾಚಾರ್ಯ ಇತರರ ಲಗಾನ್ ಟೀಂ ಸಿದ್ಧಪಡಿಸಿದ್ದು ಇದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು. ಬಿಜೆಪಿ ರಾಜ್ಯಾಧ್ಯಕ್ಷರು ಬಹಿರಂಗ ಹೇಳಿಕೆ ನೀಡಬಾರದೆಂದು ಹೇಳಿದ್ದಾರೆ. ನಾನೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪ್ರಶ್ನೆ ಮಾಡುತ್ತೇನೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಿಮ್ಮ ಲಗಾನ್ ಟೀಂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾಡಿದ್ದು ಏನು ಎಂದರು.
ದೆಹಲಿ, ಬೆಂಗಳೂರು, ದಾವಣಗೆರೆಯಲ್ಲಿ ಸುದ್ದಿಗೋಷ್ಠಿಗಳನ್ನು ಮಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಇದೇ ರೇಣುಕಾಚಾರ್ಯ ಮತ್ತು ತಂಡದವರು ಮಾತನಾಡಿದ್ದರು. ಆಗ ಏಕೆ ನೀವು ಹೀಗೆಲ್ಲಾ ಮಾತನಾಡದಂತೆ ಲಗಾನ್ ಟೀಂ ಬಾಯಿಗೆ ಲಗಾಮು ಹಾಕಲಿಲ್ಲ ಎಂದು ಅವರು ಕಿಡಿಕಾರಿದರು.ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದರೆ ಇವತ್ತು ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿರುತ್ತಿತ್ತು. ಲೋಕಸಭೆಯಲ್ಲಿ ನಮ್ಮದೇ ಪಕ್ಷದ ಸದಸ್ಯೆ ಪ್ರತಿನಿಧಿಸುತ್ತಿದ್ದರು. ರಾಜ್ಯಾಧ್ಯಕ್ಷರು ಮಾಡಿದ ತಪ್ಪಿನಿಂದಾಗಿ ನಾವು ಇಂದು ಈ ಕ್ಷೇತ್ರವನ್ನೇ ಕಳೆದುಕೊಂಡೆವು ಎಂದು ಅವರು ದೂರಿದರು.
ನನಗೆ ಯಾರೂ ಸಹ ಕರೆ ಮಾಡಿ ಮಾತನಾಡಿಲ್ಲ. ಯಾರೇ ಕರೆ ಮಾಡಿದರೂ ನಾನು ಮಾತನಾಡಿ ಉತ್ತರ ಕೊಡುತ್ತೇನೆ. ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ಗಾಯತ್ರಿ ಸಿದ್ದೇಶ್ವರ ವಿರುದ್ಧ ಮಾತನಾಡಿದರೂ ಯಾಕೆ ರಾಜ್ಯ ನಾಯಕರು ರೇಣುಕಾಚಾರ್ಯ ಇತರರಿಗೆ ಎಚ್ಚರಿಕೆ ನೀಡಲಿಲ್ಲ? ಯಾವುದೇ ಕ್ರಮವನ್ನು ಯಾಕೆ ಕೈಗೊಳ್ಳಲಿಲ್ಲ ಎಂದು ಹರೀಶ್ ಬೇಸರ ವ್ಯಕ್ತಪಡಿಸಿದರು.ಆದರೆ, ಬಿ.ಪಿ.ಹರೀಶ ಸತ್ಯವನ್ನು ಮಾತನಾಡಿದ ತಕ್ಷಣ ನಾಲ್ಕು ಗೋಡೆ ಮಧ್ಯೆ ಮಾತನಾಡಿ ಎಂಬ ಮಾತುಗಳು ನೆನಪಾದವಾ? ನೀವೇ ಬೆಳೆಸಿದ ರೇಣುಕಾಚಾರ್ಯ ಮತ್ತು ಲಗಾನ್ ತಂಡವು ಏನು ಬೇಕಾದರೂ ಮಾತನಾಡಬಹುದಾ ಎಂದು ವಿಜಯೇಂದ್ರ, ರೇಣುಕಾಚಾರ್ಯ ವಿರುದ್ಧ ಹರಿಹರ ಶಾಸಕ ಬಿ.ಪಿ.ಹರೀಶ ಹರಿದಾಯ್ದರು.
- - - -24ಕೆಡಿವಿಜಿ5, 6: ಬಿ.ಪಿ.ಹರೀಶ, ಬಿಜೆಪಿ ಶಾಸಕ, ಹರಿಹರ ಕ್ಷೇತ್ರ