ಸಾರಾಂಶ
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳೂರಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಅ.27ರಿಂದ ನ.2ರವರೆಗೆ ನಡೆಯಲಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಮಂಗಳೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳೂರಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಅ.27ರಿಂದ ನ.2ರವರೆಗೆ ನಡೆಯಲಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಬ್ಯಾಡ್ಮಿಂಟನ್ ಎಸೋಸಿಯೇಶನ್ ಮತ್ತು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಎಸೋಸಿಯೇಶನ್ ವತಿಯಿಂದ ‘ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ -2025’ ನಡೆಯುತ್ತಿರುವುದು ಮಂಗಳೂರಿಗೆ ಮಾತ್ರವಲ್ಲ, ರಾಜ್ಯಕ್ಕೂ ಪ್ರತಿಷ್ಠೆಯ ವಿಷಯ ಎಂದು ಹೇಳಿದರು.ಈ ಟೂರ್ನಮೆಂಟ್‌ಗೆ ಸಿಎಂ ಈಗಾಗಲೇ 1 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಆಮಂತ್ರಣ ಪತ್ರವನ್ನೂ ಬಿಡುಗಡೆ ಮಾಡಿದ್ದಾರೆ. ಸಿಎಂ ಕೈಯಲ್ಲೇ ಟೂರ್ನಮೆಂಟ್ ಉದ್ಘಾಟನೆ ನೆರವೇರಲಿದೆ ಎಂದರು.12 ದೇಶಗಳ ಕ್ರೀಡಾಪಟುಗಳು:12 ವಿವಿಧ ದೇಶಗಳಿಂದ 100ಕ್ಕೂ ಅಧಿಕ ಕ್ರೀಡಾಪಟುಗಳು ಸೇರಿದಂತೆ ಒಟ್ಟು 350ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 150ಕ್ಕೂ ಅಧಿಕ ಮಂದಿ ಕ್ರೀಡಾಧಿಕಾರಿಗಳು ಇದ್ದರೆ, 12 ಸಾವಿರಕ್ಕೂ ಅಧಿಕ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ. 8 ಕೋರ್ಟ್‌ಗಳಲ್ಲಿ ಈ ಪಂದ್ಯಗಳು ನಡೆಯಲಿವೆ ಎಂದು ದಿನೇಶ್ ಗುಂಡೂರಾವ್ ವಿವರ ನೀಡಿದರು.
ಶಾಸಕರಾದ ಅಶೋಕ್ ಕುಮಾರ್ ರೈ, ಐವನ್ ಡಿಸೋಜ, ಮಂಜುನಾಥ ಭಂಡಾರಿ, ಮಾಜಿ ಶಾಸಕ ಅಭಯಚಂದ್ರ ಜೈನ್, ದ.ಕ. ಬ್ಯಾಡ್ಮಿಂಟನ್ ಎಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಎಸೋಸಿಯೇಶನ್ ಕಾರ್ಯದರ್ಶಿ ಸುಪ್ರೀತ್ ಆಳ್ವ, ಉಪಾಧ್ಯಕ್ಷ ಅಶೋಕ್ ಹೆಗ್ಡೆ ಮತ್ತಿತರರು ಇದ್ದರು.