ರಾಜ್ಯದಲ್ಲಿ ಭಾರಿ ಧಗೆ

| Published : Feb 23 2024, 01:45 AM IST / Updated: Feb 23 2024, 08:50 AM IST

ಸಾರಾಂಶ

ವಾಡಿಕೆಗಿಂತ 3 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ಹೆಚ್ಚಳವಾಗಿದ್ದು, ಮಳೆ ಕೊರತೆ ಕಾರಣ ತೇವಾಂಶ ಕುಸಿತ, ಬಿಸಿ ಹವೆ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ಗಿಂತ ಗರಿಷ್ಠ ಉಷ್ಣಾಂಶ ಏರಿಕೆಯಾಗಿದೆ. ಇದರಿಂದ ಜನ- ಜಾನುವಾರು ತತ್ತರಿಸುವಂತಾಗಿದೆ.

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಭಾರೀ ಪ್ರಮಾಣದ ಮಳೆ ಕೊರತೆ ಉಂಟಾಗಿದೆ. ಹೀಗಾಗಿ, ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ರಾಜ್ಯದ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ.

 ಆಕಾಶವು ಶುಭ್ರವಾಗಿರುವುದರಿಂದ ತಾಪ ಹೆಚ್ಚಳವಾಗಿದೆ. ಗರಿಷ್ಠ ಉಷ್ಣಾಂಶದ ಜೊತೆಗೆ, ಕನಿಷ್ಠ ಉಷ್ಣಾಂಶದಲ್ಲಿಯೂ ಭಾರೀ ಏರಿಕೆ ಕಂಡು ಬಂದಿದೆ.

ಗರಿಷ್ಠ 3 ಡಿಗ್ರಿ ಅಧಿಕ: ಹವಾಮಾನ ಇಲಾಖೆಯ ಅಂಕಿ-ಅಂಶದ ಪ್ರಕಾರ, ಗುರುವಾರ ಬಾದಾಮಿಯಲ್ಲಿ 36.4 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ 3 ಡಿಗ್ರಿ ಸೆಲ್ಶಿಯಸ್‌ ಹೆಚ್ಚು. 

ಅದೇ ರೀತಿ ಮಂಡ್ಯ (35.6) ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (34.4) ವಾಡಿಕೆ ಪ್ರಮಾಣಕ್ಕಿಂತ ತಲಾ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾದ ಬಗ್ಗೆ ವರದಿಯಾಗಿದೆ. 

ಉಳಿದಂತೆ ಬೆಂಗಳೂರಿನ ಎಚ್ಎಎಲ್‌ ವಿಮಾನ ನಿಲ್ದಾಣ, ಬಾಗಲಕೋಟೆ, ಧಾರಾವಾಡ, ಹಂಪಿ, ಹೊನ್ನಾವರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವೂ ವಾಡಿಕೆ ಪ್ರಮಾಣಕ್ಕಿಂತ ತಲಾ 2 ಡಿಗ್ರಿ ಸೆಲ್ಶಿಯಸ್‌ನಷ್ಟು ಏರಿಕೆಯಾಗಿದೆ.

ಬೆಂಗಳೂರಲ್ಲಿ ಕನಿಷ್ಠ 5 ಡಿಗ್ರಿ ಅಧಿಕ: ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 21.2 ಡಿಗ್ರಿ ಸೆಲ್ಶಿಯಸ್‌ ಕನಿಷ್ಠ ವರದಿಯಾಗಿದೆ. 

ಇದು ವಾಡಿಕೆ ಪ್ರಮಾಣಕ್ಕಿಂತ ಬರೋಬ್ಬರಿ 5 ಡಿಗ್ರಿ ಸೆಲ್ಶಿಯಸ್‌ ಹೆಚ್ಚಾಗಿದೆ. ಅದೇ ರೀತಿ ಬಾಗಲಕೋಟೆ (14.9) ಬೆಂಗಳೂರು ನಗರ (21.8) ಹಾಗೂ ಕಲಬುರಗಿಯಲ್ಲಿ (21.6) ವಾಡಿಕೆ ಪ್ರಮಾಣಕ್ಕಿಂತ ತಲಾ 3 ಡಿಗ್ರಿ ಸೆಲ್ಶಿಯಸ್‌ ಕನಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗಿದೆ. 

ಬಾದಾಮಿ ಹಾಗೂ ರಾಯಚೂರಿನಲ್ಲಿ ತಲಾ 2 ಡಿಗ್ರಿ ಸೆಲ್ಶಿಯಸ್‌ನಷ್ಟು ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.