ಸಾರಾಂಶ
ಕೆನರಾ ಬ್ಯಾಂಕ್‌ನಿಂದ ಸಾಲ ಮಂಜೂರು ಪತ್ರ ವಿತರಣೆಕನ್ನಡಪ್ರಭ ವಾರ್ತೆ ಅರಸೀಕೆರೆ
ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು. ಕೆನರಾ ಬ್ಯಾಂಕ್‌ನಿಂದ ಎಲ್ಲಾ ತರಹದ ಸವಲತ್ತುಗಳನ್ನು ನೀಡುತ್ತಿದ್ದೇವೆ. ತೆಗೆದುಕೊಂಡ ಸಾಲಕ್ಕೆ ಪ್ರಾಮಾಣಿಕವಾಗಿ ಮರುಪಾವತಿಸಿದರೆ ಬ್ಯಾಂಕ್ ಕೂಡ ಅಭಿವೃದ್ದಿ ಹೊಂದಲು ಸಾಧ್ಯ. ಈ ದಿನ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳಿಗೆ ಸಾಲ ಮಂಜೂರು ಪತ್ರ ನೀಡುತ್ತಿದ್ದು, ಈ ಹಣವನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಹಾಸನ ಪ್ರಾಂತೀಯ ಅಧಿಕಾರಿ ಮಹೇಂದ್ರ ವೈ ಜಂಬೂಲ್ಕರ್ ಅಭಿಪ್ರಾಯಪಟ್ಟರು.ತಾಲೂಕಿನ ಶಶಿವಾಳ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಮತ್ತು ಸ್ನೇಹ ಜೀವನ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ‘ಕೆನರಾ ಬ್ಯಾಂಕ್‌ನಿಂದ ಗ್ರಾಮಗಳಲ್ಲಿ ವೈಯಕ್ತಿಕ ಸಾಲ ಪಡೆದು ಅವರ ಕಿರುಕುಳಕ್ಕೆ ಅಂಜಿ ಸಾಲ ತೀರಿಸಲು ಮತ್ತೊಂದು ಸಾಲ ತೆಗೆದು ಗೊಂದಲದಲ್ಲಿ ಸಿಕ್ಕಿಕೊಳ್ಳುವ ಬದಲು ನಮ್ಮ ಬ್ಯಾಂಕ್‌ನಿಂದ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿಸಿದ್ದೇ ಆದರೆ ನಿಮಗೆ ಹೆಚ್ಚುವರಿ ಸಾಲವನ್ನು ಮಂಜೂರು ಮಾಡಲು ಸಾಧ್ಯ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಶಿವಾಳ ಬ್ಯಾಂಕ್ ವ್ಯವಸ್ಥಾಪಕಿ ರೇಷ್ಮಾ ಮಾತನಾಡಿ, ಕೆಲವು ವರ್ಷಗಳ ಹಿಂದೆ ಸಾಲ ಪಡೆಯಬೇಕಾದರೆ ಬ್ಯಾಂಕ್‌ಗೆ ಅಲೆದು ಸುಸ್ತಾಗಿ ಸಾಲವೇ ಬೇಡವೆಂದು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಈಗ ಆ ಸ್ಥಿತಿ ಇರುವುದಿಲ್ಲ. ಬ್ಯಾಂಕ್ ಬಾಗಿಲಿಗೆ ಬರಲಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬನ್ನಿ. ಸ್ನೇಹ ಜೀವನ ಫೌಂಡೇಷನ್ ಸ್ವಸಹಾಯ ಸಂಘಗಳಿಗೆ ನಮ್ಮ ಬ್ಯಾಂಕ್‌ನಿಂದ ಸಾಲ ಕೊಡಿಸಿ ಮರುಪಾವತಿಸುವ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿರುವುದು ಸಂತೋಷದ ವಿಚಾರ ಎಂದರು.ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣನವರು ೧೨ ನೇ ಶತಮಾನದಲ್ಲಿ ಸ್ತ್ರೀಯರಿಗೆ ಸಮಾನತೆ ಎಂಬ ತತ್ವ, ಸಿದ್ಧಾಂತಗಳಿಗೆ ಇತ್ತೀಚೆಗೆ ಕಾರ್ಯಕಲ್ಪ ದೊರೆತಿದೆ. ಅದರಂತೆ ಮಹಿಳೆಯರು ಸ್ವಾವಲಂಬನೆ ಹೊಂದಿ ಕುಟುಂಬ ನಿರ್ವಹಣೆಗೆ ಸಹಕರಿಸಬೇಕು ಎಂದರು.
ಸ್ನೇಹಾ ಜೀವನ ಫೌಂಡೇಷನ್ ಮುಖ್ಯಸ್ಥ ನವಕೋಟಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಸ್ವಸಹಾಯ ಸಂಘಗಳನ್ನು ಸಂಘಟಿಸಿ ಅವರಿಗೆ ಬ್ಯಾಂಕ್ ವತಿಯಿಂದ ಸ್ವಂತ ಉದ್ಯೋಗ, ಹೈನುಗಾರಿಕೆ, ಗೃಹಸಾಲ ಮುಂತಾದ ಸಾಲಗಳನ್ನು ಬ್ಯಾಂಕ್ ವತಿಯಿಂದ ಕೊಡಿಸಿ ಮರುಪಾವತಿ ಮಾಡಿಸಿಕೊಡುವ ಜವಾಬ್ದಾರಿ ನಮ್ಮದಾಗಿರುತ್ತದೆ. ಸ್ವಸಹಾಯ ಸಂಘಗಳು ದುರುಪಯೋಗ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳಿ ಎಂದರು.ಡೆಲ್ನಾಜೋಸ್ ಅಗ್ರಿ ಮ್ಯಾನೇಜರ್ ಹಾಸನ, ಅಬ್ದುಲ್ ಅಜೀಜ್ ಕೆನರಾ ಬ್ಯಾಂಕ್ ಡಿ.ಎಂ.ಕುರ್ಕೆ, ಎಚ್.ಆರ್. ವಿಶ್ವನಾಥ್, ಫೀಲ್ಡ್ ಆಫೀಸರ್ ಡಿ.ಎಂ.ಕುರ್ಕೆ, ಸುವರ್ಣ ಮಾಲಿನಿ, ಕುಸುಮ ನಬಾರ್ಡ್ ಹಾಸನ, ಎನ್‌ಜಿಒ ಸಿಬ್ಬಂದಿ, ಕೆನರಾ ಬ್ಯಾಂಕ್ ಸಿಬ್ಬಂದಿ, ಕಾರ್ಯಕ್ರಮದ ರೂವಾರಿಗಳಾದ ಎಸ್.ಸಿ. ಚಂದ್ರಶೇಖರ್, ಎಸ್.ಬಿ. ಸಿದ್ದರಾಜು, ಪತ್ರಕರ್ತರಾದ ಪುಟ್ಟಪ್ಪ ಇದ್ದರು. ಅರಸೀಕೆರೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.