ರಾಜ್ಯಾದ್ಯಂತ ಶುದ್ಧಗಂಗಾ ಅಭಿಯಾನ: ಅನಿಲ್‌ ಕುಮಾರ್

| Published : Jan 02 2025, 12:32 AM IST

ರಾಜ್ಯಾದ್ಯಂತ ಶುದ್ಧಗಂಗಾ ಅಭಿಯಾನ: ಅನಿಲ್‌ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

‘ಶುದ್ಧಗಂಗಾ’ ಎಂಬ ಹೆಸರಿನಲ್ಲಿ ಇದುವರೆಗೆ ರಾಜ್ಯಾದ್ಯಂತ ೪೮೧ ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರತಿದಿನ೨೨ ಲಕ್ಷ ಲೀಟರ್ ಶುದ್ಧಕುಡಿಯುವ ನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ. ಯೋಜನೆಗೆ ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ರಾಜ್ಯಾದ್ಯಂತ ಜನವರಿ ತಿಂಗಳಲ್ಲಿ ಶುದ್ಧಜಲ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಂತೆ ರಾಜ್ಯದ ಸುಮಾರು ೧.೫೦ ಲಕ್ಷ ಜನರಿಗೆ ಶುದ್ಧಜಲ ಬಳಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್‌ ಎಸ್.ಎಸ್‌. ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಧಿಕಗೊಂಡ ಜನಸಂಖ್ಯೆ ಹಾಗೂ ಪರಿಸರ ನಾಶದ ಪರಿಣಾಮದಿಂದ ನೀರಿನ ಅಭಾವ ತಲೆದೋರಿದ್ದು ಶುದ್ಧಕುಡಿಯುವ ನೀರನ್ನು ಜನರಿಗೆ ಪೂರೈಸುವುದು ಕಷ್ಟಕರವಾಗಿ ಪರಿಣಮಿಸಿದೆ. ರಾಜ್ಯದ ಹಲವಾರು ಹಳ್ಳಿಗಳಲ್ಲಿ ಜನರು ಇಂದೂ ಅಶುದ್ಧ ನೀರನ್ನು ಕುಡಿಯುತ್ತಿರುವುದನ್ನು ಕಾಣುತ್ತೇವೆ. ರಾಜ್ಯದ ಶೇ.೬೦ರಷ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ಶೇ. ೨೦ರಷ್ಟುಅಧಿಕ ನೈಟ್ರೇಟ್ ಹಾಗೂ ಶೇ.೩೦ರಷ್ಟು ಸೂಷ್ಮಾಣುಗಳಿಂದ ಕಲುಷಿತವಾಗಿ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ರಾಜ್ಯದ ಹೆಚ್ಚಿನ ತಾಲೂಕುಗಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ಇದನ್ನು ಮನಗಂಡು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಕರ್ನಾಟಕದಲ್ಲಿ ಪ್ರಥಮವಾಗಿ ಸಮುದಾಯ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡರು.‘ಶುದ್ಧಗಂಗಾ’ ಎಂಬ ಹೆಸರಿನಲ್ಲಿ ಇದುವರೆಗೆ ರಾಜ್ಯಾದ್ಯಂತ ೪೮೧ ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರತಿದಿನ೨೨ ಲಕ್ಷ ಲೀಟರ್ ಶುದ್ಧಕುಡಿಯುವ ನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ. ಯೋಜನೆಗೆ ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ. ಜಾಗೃತಿ ಅಭಿಯಾನ: ಶುದ್ಧಜಲ ಬಳಕೆಯ ಕುರಿತಂತೆ ಜನ ಸಾಮಾನ್ಯರಿಗೆ ಅರಿವಿನ ಕೊರತೆಯಿದೆ. ಇದಕ್ಕಾಗಿ ಜನವರಿ ತಿಂಗಳಾದ್ಯಂತ ಶುದ್ಧಜಲ ಜಾಗೃತಿ ಅಭಿಯಾನವನ್ನುಶುದ್ಧಗಂಗಾ ಘಟಕಗಳಿರುವ ಪ್ರದೇಶದ ಜನರಿಗೆ ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ ಕಾರ್ಯಕ್ರಮ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳಲ್ಲಿ ಮಾಹಿತಿ ಹಾಗೂ ಮನೆಮನೆಗೆ ತೆರಳಿ ನೋಂದಾವಣೆ ಮೊದಲಾದ ೫೦೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬುಧವಾರ ಶುದ್ಧಜಲ ಅಭಿಯಾನದ ಕರಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ ಪೈ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಶುದ್ಧಗಂಗಾ/ ಕೆರೆಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಶಿವಾನಂದ ಆಚಾರ್ಯ ಉಪಸ್ಥಿತರಿದ್ದರು.