ಸಾರಾಂಶ
ಮುಸ್ಲಿಂ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಮಾತನಾಡಿ, ಪೈಗಂಬರ್ ಮತ್ತು ಇಸ್ಲಾಂ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆರೋಪಿಗಳು ಆಡಿದ್ದಾರೆ.
ಕಂಪ್ಲಿ: ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ಹಾಗೂ ಉತ್ತರ ಪ್ರದೇಶದ ಗಾಜಿಯಬಾದ್‌ನ ನರಸಿಂಗಾನಂದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮುಸ್ಲಿಂ ಸಮಾಜದ ಮುಖಂಡರು ಶುಕ್ರವಾರ ತಹಸೀಲ್ದಾರ್ ಶಿವರಾಜ್ ಶಿವಪುರ ಗೆ ಮನವಿ ಸಲ್ಲಿಸಿದರು. ಮುಸ್ಲಿಂ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಮಾತನಾಡಿ, ಪೈಗಂಬರ್ ಮತ್ತು ಇಸ್ಲಾಂ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆರೋಪಿಗಳು ಆಡಿದ್ದಾರೆ. ಇದರಿಂದ ಸಮಾಜಕ್ಕೆ ಬಹಳ ನೋವಾಗಿದೆ. ಇಂತಹ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಕದಲುವ ಪರಿಸ್ಥಿತಿ ಉಂಟಾಗುತ್ತದೆ. ಸ್ವಾಮೀಜಿ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಎಫ್.ಐ.ಆರ್ ದಾಖಲಾಗಿದ್ದರೂ ಈವರೆಗೂ ಅವರನ್ನು ಬಂಧಿಸುವ ಅಥವಾ ಶಿಕ್ಷಿಸುವ ಯಾವುದೇ ಕ್ರಮ ಜರುಗಿಲ್ಲ. ಕೂಡಲೇ ಆಯಾ ರಾಜ್ಯಗಳ ಸರ್ಕಾರಗಳು ಎಚ್ಚೆತ್ತುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೈಯದ್ ಷಾ ಅಬುತುರಬ್ ಖಾದ್ರಿ, ಸೈಯದ್ ಷಾ ಕಮರ್ ಸಾಹೇಬ್, ಮುತುವಲ್ಲಿಗಳು, ಸಮಾಜದ ಮುಖಂಡರು ಇದ್ದರು.