ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್ ಅವರ ಸಾಕ್ಷ್ಯ ಹೇಳಿಕೆ ದಾಖಲು ಪ್ರಕ್ರಿಯೆ ಶೇ.90ರಷ್ಟು ಪೂರ್ಣಗೊಂಡಿದ್ದು, ಮುಂದಿನ ಹೇಳಿಕೆ ದಾಖಲು ಪ್ರಕ್ರಿಯೆಯು ಅ.5ರಂದು ನಡೆಯಲಿದೆ.
ಬೆಂಗಳೂರು : ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್ ಅವರ ಸಾಕ್ಷ್ಯ ಹೇಳಿಕೆ ದಾಖಲು ಪ್ರಕ್ರಿಯೆ ಶೇ.90ರಷ್ಟು ಪೂರ್ಣಗೊಂಡಿದ್ದು, ಮುಂದಿನ ಹೇಳಿಕೆ ದಾಖಲು ಪ್ರಕ್ರಿಯೆಯು ಅ.5ರಂದು ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಗರದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀರಾದ ಸುಜಾತಾ ಎಂ.ಸಾಂಬ್ರಾಣಿ ಅವರು ಬುಧವಾರ ಮುಂದುವರಿಸಿದರು.
ಬುಧವಾರವೂ ಸುಮಾರು ಮೂರು ಗಂಟೆಗಳ ಕಾಲ ಪ್ರದೂಷ್ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಆದರೆ, ಸಾಕ್ಷ್ಯ ದಾಖಲಾತಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅ.5ಕ್ಕೆ ವಿಚಾರಣೆ ಮುಂದೂಡಲಾಗಿದೆ. ಪ್ರದೂಷ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ನ್ಯಾಯಾಧೀಶರು, ಅ.5ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕಾಮಾಕ್ಷಿಪಾಳ್ಯ ಠಾಣಾ ಇನ್ಸ್‌ಪೆಕ್ಟರ್ ಮತ್ತು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ.
ರೇಣುಕಸ್ವಾಮಿ ಮೃತದೇಹವನ್ನು ಸುಮನಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆಗೆ ವಿಲೇವಾರಿ ಮಾಡಿ, ಹಿಂದಿರುಗುವವರೆಗೆ ಬುಧವಾರ ಪ್ರದೂಷ್ ಸಾಕ್ಷ್ಯ ಹೇಳಿಕೆ ದಾಖಲಿಸಿದ್ದಾರೆ. ಅದರೊಂದಿಗೆ ಪ್ರದೂಷ್ ಸಾಕ್ಷ್ಯ ದಾಖಲಾತಿಯು ಶೇ.90ರಷ್ಟು ಮುಗಿದಂತಿದ್ದು, ಅ.5ರಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಸೌಲಭ್ಯ ಕಲ್ಪಿಸಿ:
ತಾನು ಮಾಫಿ ಸಾಕ್ಷಿಯಾಗಲು ನ್ಯಾಯಾಲಯ ಅರ್ಜಿ ಸಲ್ಲಿಸಿದ ನಂತರ ತನ್ನ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ನಂತರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು/ಭೇಟಿ ಮಾಡಲು ನನಗೆ ಅವಕಾಶ ಕಲ್ಪಿಸುತ್ತಿಲ್ಲ. ಕ್ಯಾಂಟೀನ್, ಬೇಕರಿ ಮತ್ತು ಪ್ರಿಸನ್ ಕಾಲಿಂಗ್ ಸಿಸ್ಟಂ ಸ್ಥಗಿತಗೊಳಿಸಲಾಗಿದೆ. ಹೆಚ್ಚು ಸಮಯ ಲಾಕಪ್‌ನಲ್ಲಿಯೇ ಕೂಡಿ ಹಾಕಲಾಗಿದೆ. ಹಾಗಾಗಿ, ಕುಟುಂಬ ಸದಸ್ಯರನ್ನು ಭೇಟಿ ಮಾಡಲು, ಕ್ಯಾಂಟಿನ್, ಇ-ಮುಲಾಕಾತ್, ಪ್ರಿಸನ್ ಕಾಲಿಂಗ್ ಸಿಸ್ಟಂ ಸೌಲಭ್ಯ ಕಲ್ಪಿಸಬೇಕು. ಲಾಕಪ್ ಅವಧಿಯಲ್ಲಿ ವಿನಾಯ್ತಿ ನೀಡಬೇಕು ಎಂದು ಪ್ರದೂಷ್ ಕೇಳಿದರು.
ಆ ಮನವಿ ಪರಿಗಣಿಸಿದ ನ್ಯಾಯಾಲಯ, ಕೇಳಿರುವ ಕಲ್ಪಿಸಬೇಕು. ಜೈಲು ಕೈಪಿಡಿ ಅನುಸಾರ ಲಾಕಪ್ ಸಮಯವನ್ನು ವಿನಾಯ್ತಿ ನೀಡಬೇಕು. ಸೆಲ್‌ಯಿಂದ ಹೊರಗಡೆ ಬಂದಾಗ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶಿಸಿದೆ.
ದೃಶ್ಯ/ಪೋಟೋ ಡಿಲೀಟ್:
ಪ್ರಕರಣದ ವಿಚಾರಣಾ ಪ್ರಕ್ರಿಯೆಯ ವಿಡಿಯೋ ಹಾಗೂ ಪೋಟೋ ಚಿತ್ರೀಕರಣ ಮತ್ತು ಪ್ರಸಾರಕ್ಕೆ ನಿಷೇಧ ಹೇರಲಾಗಿದೆ. ಹೀಗಿದ್ದರೂ, ಪ್ರದೂಷ್ ಅವರ ಸಾಕ್ಷ್ಯ ಹೇಳಿಕೆ ಪ್ರಕ್ರಿಯೆಯ ದೃಶ್ಯಗಳನ್ನು ಕೆಲವರು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ-ಫೋಟೋ ಹಾಕಿದ್ದಾರೆ. ಅದನ್ನು ಕೂಡಲೇ ಡಿಲೀಟ್ ಮಾಡಲು ಕ್ರಮ ಜರುಗಿಸಬೇಕು ಎಂದು ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್‌ಗೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.
