ಸಾರಾಂಶ
ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪದೇಪದೇ ಹೇಳಿಕೆ ನೀಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿ ಹೊನ್ನಾಳಿಯ ಕೆಲವು ನಕಲಿ ಮುಖಂಡರ ಇದ್ದಾರೆ. ಅವರ ಹೇಳಿಕೆ, ಮಾತುಗಳು ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂಬಂತಿವೆ ಎಂದು ಎಂ.ಪಿ.ರೇಣುಕಾಚಾರ್ಯ ಅಭಿಮಾನಿ ಬಳಗದ ಮುಖಂಡ ರಾಜು ವೀರಣ್ಣ ಲೇವಡಿ ಮಾಡಿದರು.
ದಾವಣಗೆರೆ : ಬಿಜೆಪಿ ರಾಜ್ಯ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪದೇಪದೇ ಹೇಳಿಕೆ ನೀಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿ ಹೊನ್ನಾಳಿಯ ಕೆಲವು ನಕಲಿ ಮುಖಂಡರ ಇದ್ದಾರೆ. ಅವರ ಹೇಳಿಕೆ, ಮಾತುಗಳು ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂಬಂತಿವೆ ಎಂದು ಎಂ.ಪಿ.ರೇಣುಕಾಚಾರ್ಯ ಅಭಿಮಾನಿ ಬಳಗದ ಮುಖಂಡ ರಾಜು ವೀರಣ್ಣ ಲೇವಡಿ ಮಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕರು ವಿಜಯಪುರ ಕ್ಷೇತ್ರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳರನ್ನು ಉಚ್ಚಾಟಿಸಿದ್ದಾರೆ. ಅವರ ಕ್ರಮ ಪ್ರಶ್ನಿಸುವ ಹಕ್ಕು ಇಂತಹವರಿಗೆ ಇದೆಯೇ ಎಂದರು.
ಪಕ್ಷದ ರಾಷ್ಟ್ರೀಯ ನಾಯಕರು ಕೈಗೊಂಡ ಉಚ್ಚಾಟನೆ ನಿರ್ಧಾರದಿಂದ ಕರ್ನಾಟಕ ಬಿಜೆಪಿಯಲ್ಲಿದ್ದ ಗೊಂದಲ ಬಗೆಹರಿದಿದೆ. ಹೊನ್ನಾಳಿಯ ಕೆಲ ಮುಖಂಡರು ಎಂಬುದಾಗಿ ಹೇಳಿಕೊಳ್ಳುವ ನಕಲಿ ಮುಖಂಡರಾರೂ ಪಕ್ಷದ ನಿಷ್ಟಾವಂತರಲ್ಲ. ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ಸಿನೊಂದಿಗೆ ಒಳಒಪ್ಪಂದ ಮಾಡಿಕೊಂಡಿರುವುದು ಅಲ್ಲಿನ ಅವಳಿ ತಾಲೂಕಿನ ಜನತೆಗೆ ಗೊತ್ತಿರುವ ಸಂಗತಿ ಎಂದು ತಿಳಿಸಿದರು.
ರೇಣುಕಾಚಾರ್ಯರಿಗೆ ಮೊದಲ ಸಲ ನೋಟಿಸ್ ಬಂದಿದ್ದು, ಎಂದಿಗೂ ಉಚ್ಚಾಟನೆಯಾಗಿಲ್ಲ. ಹೊನ್ನಾಳಿ ಕ್ಷೇತ್ರದ ಕೆಲವು ಮುಖಂಡರು ಬೇರೆ ಪಕ್ಷಗಳಿಗೆ ಹೋಗಿ, ಚುನಾವಣೆ ವೇಳೆ ಬಿಜೆಪಿಗೆ ಬರುತ್ತಾರೆ. ಅಂತಹವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು ಎಂದು ರಾಜು ವೀರಣ್ಣ ತಿರುಗೇಟು ನೀಡಿದರು.
ಪಕ್ಷದ ಯುವ ಮುಖಂಡರಾದ ಪ್ರವೀಣ ಜಾಧವ್, ಪಂಜು ಪೈಲ್ವಾನ್, ಜಿ.ದಯಾನಂದ, ಕೆ.ಎನ್. ವೆಂಕಟೇಶ, ಸುಮಂತ್, ಪ್ರಶಾಂತ ಆನಗೋಡು, ಪ್ರಶಾಂತ ಇತರರು ಇದ್ದರು.